ಹುಣಸಗಿ | ಅಕ್ರಮ ಚಟುವಟಿಕೆ ತಡೆಗೆ ಗ್ರಾಮೀಣ ಪ್ರದೇಶಗಳಲ್ಲಿ ಡ್ರೋಣ್ ಕಣ್ಗಾವಲು ಆರಂಭ

ಹುಣಸಗಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವ ಹಾಗೂ ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮೆರಾ ಮೂಲಕ ಕಣ್ಗಾವಲು ಆರಂಭಿಸಿದೆ.
ಹುಣಸಗಿ ಠಾಣೆಯ ಸಿಪಿಐ ರವಿಕುಮಾರ್ ಅವರ ನೇತೃತ್ವದಲ್ಲಿ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಕುಂಟೆ, ತೀರ್ಥಲ ಹುಲಿಕೇರಿ ಗುಡ್ಡ, ರಾಜವಾಳಗುಡ್ಡ, ಕಕ್ಕೇರಾ (ಅಂಬಾನಗರ) ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾಗಳನ್ನು ಹಾರಿಸಲಾಯಿತು.
ಗ್ರಾಮಗಳಲ್ಲಿ ನಡೆಯುವ ಇಸ್ಪೀಟ್, ಜೂಜಾಟ, ಮಟ್ಕಾ ಬರೆಯುವುದು, ಕೋಳಿ ಪಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಸಾರ್ವಜನಿಕರು ಯಾವುದೇ ಅಕ್ರಮ ಚಟುವಟಿಕೆಗಳಿಗೆ ಮುಂದಾಗದಂತೆ ಎಚ್ಚರಿಕೆ ನೀಡುವ ಸಂದೇಶವನ್ನೂ ಪೊಲೀಸ್ ಇಲಾಖೆ ರವಾನಿಸಿದೆ.
ಈ ಕುರಿತು ಮಾಹಿತಿ ನೀಡಿದ ಸಿಪಿಐ ರವಿಕುಮಾರ್, ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು ಹಾಗೂ ಸಾರ್ವಜನಿಕರು ಇಂತಹ ಕೃತ್ಯಗಳಿಗೆ ಬೆಂಬಲ ನೀಡಬಾರದು ಎಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಡ್ರೋಣ್ ಕ್ಯಾಮೆರಾ ಕಣ್ಗಾವಲು ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಕೊಡೇಕಲ್ ಪೊಲೀಸ್ ಠಾಣೆಯ ಪಿಎಸ್‌ಐ ರಾಜಶೇಖರ ರಾಥೋಡ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಡ್ರೋಣ್ ಕಣ್ಗಾವಲಿನಲ್ಲಿ ಯಾವುದೇ ಅಕ್ರಮ ಚಟುವಟಿಕೆ ಪತ್ತೆಯಾಗಿದೆಯೇ ಎಂಬ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.







