ಗುರುಮಠಕಲ್ ರೈತರಿಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತುವೆ : ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗಾಗಿ ಭೂಮಿ ನೀಡಿದ ಗುರುಮಠಕಲ್ ಕ್ಷೇತ್ರದ ರೈತರಿಗೆ ಕಳೆದ 10 ವರ್ಷಗಳಿಂದಲೂ ಸಮರ್ಪಕ ಪರಿಹಾರ ದೊರಕಿಲ್ಲ. ಈ ಅನ್ಯಾಯದ ವಿರುದ್ಧ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ರೈತರ ಪರವಾಗಿ ಧ್ವನಿ ಎತ್ತುವುದಾಗಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ವಡ್ನಳ್ಳಿ, ಅಲ್ಲಿಪೂರ ಹಾಗೂ ಬಸವಂತಪುರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸನ್ನತಿ ಬ್ಯಾರೇಜ್ ಯೋಜನೆಯಿಂದ ಗುರುಮಠಕಲ್, ಯಾದಗಿರಿ ಹಾಗೂ ಚಿತ್ತಾಪುರ ಕ್ಷೇತ್ರಗಳ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುವ ಅವಕಾಶವಿದೆ. ಆದರೆ ಸರ್ಕಾರದಿಂದ ಅಗತ್ಯ ಗೆಜೆಟ್ ನೋಟಿಫಿಕೇಶನ್ ಹೊರಡಿಸದ ಕಾರಣ ಸಾವಿರಾರು ಎಕರೆ ಕೃಷಿಭೂಮಿಗೆ ಇನ್ನೂ ನೀರು ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗುರುಮಠಕಲ್ ಕ್ಷೇತ್ರದ 3,441 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶವಿದ್ದರೂ ಪ್ರಸ್ತುತ ಕೇವಲ 456 ಹೆಕ್ಟೇರ್‌ಗೆ ಮಾತ್ರ ನೀರು ಹರಿಯುತ್ತಿದೆ. ಉಳಿದ 2,985 ಹೆಕ್ಟೇರ್ ಪ್ರದೇಶಕ್ಕೂ ನೀರು ತಲುಪಿಸಲು ಸರ್ಕಾರ ತಕ್ಷಣ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸನ್ನತಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ವಿತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದ ಅವರು, ರೈತರ ಹಿತಾಸಕ್ತಿಗಾಗಿ ಸದನದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಹೇಳಿದರು.
ಬಸವಂತಪುರದಲ್ಲಿ 52.33 ಲಕ್ಷ ರೂ. ವೆಚ್ಚದ ಸರ್ಕಾರಿ ಪ್ರೌಢಶಾಲೆಯ ಮೂರು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ವೇಳೆ, “ಸರ್ಕಾರಿ ಕಾರ್ಯಕ್ರಮಗಳಿಗೆ ಶಾಲು, ಹಾರ ತರುವ ಬದಲು ಪುಸ್ತಕ ಉಡುಗೊರೆಯಾಗಿ ನೀಡಿ. ಅದನ್ನು ಓದುವವರಿಗೆ ನೀಡಲು ಸಾಧ್ಯವಾಗುತ್ತದೆ” ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಅಲ್ಲಿಪೂರ ಗ್ರಾಮದಲ್ಲಿ 1.25 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಸೇತುವೆ ಕಾಮಗಾರಿಗೂ ಚಾಲನೆ ನೀಡಿ, ಮೂಲಸೌಕರ್ಯ ಅಭಿವೃದ್ಧಿಯಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿದ್ದರೂ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅಧಿಕಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಹಣ ಬಳಕೆಗೆ ತಕ್ಷಣ ಅಧಿಕಾರ ನೀಡುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಮಹಾದೇವ, ಪಿಡಬ್ಲೂಡಿ ಎಇಇ ಕೈಲಾಶ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹೂಗಾರ, ಜೆಸ್ಕಾಂ ಎಇಇ ಮಾರ್ಕಂಡೇಯ, ಎಇ ಶಂಕರಗೌಡ, ಆರ್‌ಐ ರಾಜಶೇಖರ ಪಾಟೀಲ, ಎಡಿ ಮಲ್ಲಪ್ಪ, ಪಿಡಿಒ ಮಮ್ತಾಜ್ ಬೇಗಂ, ಶರಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ದೊಡ್ಡಣಗೌಡ ಅರಕೇರಾ, ಮೈಪಾಲರಡ್ಡಿ ಮಲ್ಹಾರ, ಶರಣಯ್ಯಸ್ವಾಮಿ, ಪಂಪನಗೌಡ, ಅಶೋಕರಡ್ಡಿ ಮಾಲಿಪಾಟೀಲ, ಸಿದ್ದಲಿಂಗರಡ್ಡಿ ಸಾಹು, ಸಿದ್ದರಾಮರಡ್ಡಿ, ಹಣಮಂತ ಉಂಬರಕಿ, ಸಿದ್ದಪ್ಪ ಬಡಿಗೇರ್, ಸಿದ್ದಪ್ಪ ಹೋರುಂಚಾ, ಏಸುಮಿತ್ರ ಖಾನಳ್ಳಿ, ಗೋಪಾಲ ಖಾನಳ್ಳಿ ತಾಂಡಾ, ಮಹೇಶ, ಮಾರ್ಥಂಡ, ಭಾಗಪ್ಪ ಅಚ್ಚೋಲಿ, ವೀರೇಶ ಅರಕೇರಾ, ಬಸವರಾಜಪ್ಪಗೌಡ ಕ್ಯಾಸಪನಳ್ಳಿ, ಶಿವಯೋಗಿ ಯರಗೋಳ, ಅಹ್ಮದ್ ಯರಗೋಳ, ಸೇರಿದಂತೆ ಇತರರಿದ್ದರು.






