ಸರಕಾರಿ ಶಾಲಾ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿರುವುದು ಖಂಡನೀಯ: ಎಐಡಿಎಸ್‍ಓ

ಯಾದಗಿರಿ: ಸರಕಾರಿ ಶಾಲಾ ವಿದ್ಯಾರ್ಥಿಗಳ ಕಲ್ಯಾಣದ ವಿಷಯದಲ್ಲಿ ರಾಜ್ಯ ಸರಕಾರ ತೀವ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಎಐಡಿಎಸ್‍ಓ (AIDSO) ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಅವರು ಖಂಡಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಅರ್ಧಕ್ಕಿಂತ ಹೆಚ್ಚಿನ ಅವಧಿ ಮುಗಿದಿದ್ದರೂ ಹಲವೆಡೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೂ ಮತ್ತು ಸಾಕ್ಸ್‌ಗಳು ಇನ್ನೂ ವಿತರಣೆ ಆಗಿಲ್ಲ. ಇದರಿಂದಾಗಿ ಅನೇಕ ಮಕ್ಕಳು ಬರಿಗಾಲಿನಲ್ಲೇ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಾದ್ಯಂತ ಚಳಿ ತೀವ್ರವಾಗಿರುವ ಈ ಸಮಯದಲ್ಲಿ ಪಾದರಕ್ಷೆಗಳಿಲ್ಲದೆ ಮಕ್ಕಳು ಓಡಾಡುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯರ ವರದಿಗಳ ಪ್ರಕಾರ, ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಆಗದ ಕಾರಣ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಮೊಟ್ಟೆಯ ಬೆಲೆ ಏರಿಕೆಯಾಗಿರುವುದರಿಂದ ಅನೇಕ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಹಣದಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವಂತಾಗಿದೆ. ಜೊತೆಗೆ ಹಲವಾರು ಶಾಲೆಗಳಿಗೆ ಇನ್ನೂ ಸಮವಸ್ತ್ರಗಳು ತಲುಪಿಲ್ಲ ಎಂದು ಅವರು ಆರೋಪಿಸಿದರು.
ಒಂದೆಡೆ ಮಕ್ಕಳ ಮೂಲಭೂತ ಅಗತ್ಯಗಳನ್ನು ಪೂರೈಸಲು ಸರಕಾರ ವಿಫಲವಾಗಿದ್ದರೆ, ಮತ್ತೊಂದೆಡೆ ಯಾವುದೇ ಸ್ಪಷ್ಟ ಹಣಕಾಸು ಯೋಜನೆ ಇಲ್ಲದೆ ಸರಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ಗಳಾಗಿ ಮೇಲ್ದರ್ಜೆಗೇರಿಸಲು ಮುಂದಾಗಿರುವುದು ವಿರೋಧಾಭಾಸದ ನಡೆ ಎಂದು ಎಐಡಿಎಸ್‍ಓ ಟೀಕಿಸಿದೆ.
ಸರಕಾರ ತಕ್ಷಣವೇ ಶೂ ಮತ್ತು ಸಾಕ್ಸ್‌ಗಳಿಗಾಗಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿ, ಯಾವುದೇ ವಿಳಂಬವಿಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಇವುಗಳು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಲ್ಪಾ ಬಿ.ಕೆ. ಅವರು ಒತ್ತಾಯಿಸಿದರು.







