ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ ʼಪಿಎಂ 15 ಅಂಶ ಕಾರ್ಯಕ್ರಮʼ ಅನುಷ್ಠಾನ ಪರಿಶೀಲನಾ ಸಭೆ

ಯಾದಗಿರಿ: ಅಲ್ಪಸಂಖ್ಯಾತರ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಜನಿಸಿದ ಮಕ್ಕಳು ಸೇರಿದಂತೆ 14 ವಯೋಮಾನರೊಳಗಿನ ಮಕ್ಕಳ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ 2026- 27ನೇ ಸಾಲಿನ 1ನೇ ಹಾಗೂ 2 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈಟ್ ಟು ಎಜುಕೇಶನ್ ಕಾಯ್ದೆಯನ್ವಯ ಇಂತಹ ಮಕ್ಕಳ ಸಮಗ್ರ ಅಂಕಿ ಅಂಶ ಹೊಂದುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿನ ಜನನದಿಂದ 14 ವಯೋಮಾನರೊಳಗಿನ ಎಲ್ಲ ಮಕ್ಕಳ ಅಂಕಿ ಅಂಶ ಕಲೆ ಹಾಕಿ ವರದಿ ಸಲ್ಲಿಸಬೇಕು. ಅಂಗನವಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನೂ ಶಾಲೆಗೆ ಸೇರಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆ ಶಿಬಿರ ನಡೆಸಿ ಇ- ಶ್ರಮ, ಕಾರ್ಮಿಕ ಕಾರ್ಡ್ ವಿತರಿಸಬೇಕು. ಆರೋಗ್ಯ ಶಿಬಿರ ಕೈಗೊಳ್ಳಬೇಕು. ಕಾರ್ಮಿಕರ ನೋಂದಣಿ ಅಭಿಯಾನ ಹಮ್ಮಿಕೊಳ್ಳಬೇಕು, ಶೈಕ್ಷಣಿಕ ಸಾಲಕ್ಕಾಗಿ ಬ್ಯಾಂಕ್ ಗಳಿಗೆ ಸಲ್ಲಿಸಲಾದ ಅರ್ಜಿಗಳು, ಮಂಜೂರಾತಿ ನೀಡಿದ, ಮಂಜೂರಾತಿಗೆ ಬಾಕಿ ಇರುವ ಹಾಗೂ ಲೋನ್ ನಿರಾಕರಿಸಿದ್ದಕ್ಕೆ ಕಾರಣಗಳ ಬಗ್ಗೆ ಮಾಹಿತಿಯನ್ನು ಸಲ್ಲಿಸಬೇಕು. ಲೀಡ್ ಬ್ಯಾಂಕ್ ಅಧಿಕಾರಿಗಳು ಆರ್ ಬಿಐ ಮಾರ್ಗಸೂಚಿ ಅನ್ವಯ ಶೈಕ್ಷಣಿಕ ಸಾಲ ಹಾಗೂ ಬಡವರಿಗೆ ಸಾಲ ವಿತರಿಸುವಂತೆ ಜಿಲ್ಲೆಯ ಎಲ್ಲ ಬ್ಯಾಂಕ್ ಗಳಿಗೆ ಸುತ್ತೋಲೆ ಹೊರಡಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಮತೀನ್, ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುಬೀನ್ ಮೊಹಾಪಾತ್ರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಉಪಸ್ಥಿತರಿದ್ದರು.
ಕುಂದುಕೊರತೆ ಸ್ವೀಕಾರ ಸಂದರ್ಭದಲ್ಲಿ ಸೈಯದ್ ಜೈನುಲ್ಲಾ ಆಬಿದೀನ್, ಮೊಹಮ್ಮದ್ ಸಲ್ಮಾನ್, ವಾಹಿದ್ ಮಿಯಾ, ಬಾಲಮಿತ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.






