ಸುರಪುರದ ಕೀರ್ತಿ ಹೊಸಮನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ
150 ಅಡಿ ಬಟ್ಟೆಯ ಮೇಲೆ 15 ಗಂಟೆ 45 ನಿಮಿಷ ಮೆಹಂದಿ ಕಲೆ: ಎರಡು ದಾಖಲೆಗಳ ಗೌರವ

ಸುರಪುರ: ನಿರಂತರ 15 ಗಂಟೆ 45 ನಿಮಿಷಗಳ ಕಾಲ ಮೆಹಂದಿ ಕಲೆಯ ಚಿತ್ರಗಳನ್ನು ಬಿಡಿಸುವ ಮೂಲಕ ಸಾಧನೆ ಮಾಡಿದ ಸುರಪುರ ತಾಲೂಕಿನ ಸತ್ಯಂಪೇಟೆಯ ಕೀರ್ತಿ ಹೊಸಮನಿ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನ 2026ನೇ ಸಾಲಿನ ಮಾನ್ಯತೆ ಲಭಿಸಿದೆ.
ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕೀರ್ತಿ, ಸೆಪ್ಟೆಂಬರ್ 4ರಂದು ಬೆಳಗ್ಗೆಯಿಂದ ಕಾಲೇಜಿನಲ್ಲಿ 150 ಅಡಿ ಉದ್ದದ ಬಟ್ಟೆಯ ಮೇಲೆ ಸತತ 15 ಗಂಟೆ 45 ನಿಮಿಷಗಳ ಕಾಲ ಮೆಹಂದಿ ಕಲಾಕೃತಿಗಳನ್ನು ಬಿಡಿಸಿದ್ದರು. ಅವರ ಈ ಸಾಧನೆಗೆ ಇದೀಗ ಎರಡು ದಾಖಲೆಗಳ ಮಾನ್ಯತೆ ದೊರೆತಿದೆ.
ಕೀರ್ತಿ ಅವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಂಡ್ಯ ಜಿಲ್ಲೆಯ ಕೀರ್ತಿ ಮುರುಳೀಧರ್ ಅವರು 100 ಅಡಿ ಉದ್ದದ ಬಟ್ಟೆಯ ಮೇಲೆ ಮೆಹಂದಿ ಕಲಾಕೃತಿಗಳನ್ನು ಬಿಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದರು. ಇದೀಗ ಸತ್ಯಂಪೇಟೆಯ ಕೀರ್ತಿ ಹೊಸಮನಿ ಅವರು 200 ಮೆಹಂದಿ ಕೋನ್‌ಗಳನ್ನು ಬಳಸಿ, 150 ಅಡಿ ಉದ್ದದ ಬಟ್ಟೆಯ ಮೇಲೆ 15 ಗಂಟೆ 45 ನಿಮಿಷಗಳ ಕಾಲ ಕಲಾಕೃತಿಗಳನ್ನು ಬಿಡಿಸುವ ಮೂಲಕ ದಾಖಲೆಗಳ ಮಾನ್ಯತೆ ಪಡೆದಿದ್ದಾರೆ.
ನನಗೆ ಮೊದಲಿನಿಂದಲೂ ಮೆಹಂದಿ ಕಲೆಯ ಬಗ್ಗೆ ಆಸಕ್ತಿ ಇತ್ತು. ಈ ಕಲೆಯ ಮೂಲಕ ನಾನೂ ಸಾಧನೆ ಮಾಡಬೇಕು ಎಂಬ ಅಭಿಲಾಷೆಯಿಂದ ಮೆಹಂದಿ ಕಲಾಕೃತಿಗಳನ್ನು ಬಿಡಿಸಿದ್ದೆ. ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನ 2026ನೇ ಸಾಲಿನ ಮಾನ್ಯತೆ ದೊರೆತಿರುವುದು ಮತ್ತು ಗೂಗಲ್‌ನಲ್ಲಿ ನನ್ನ ಕಲೆಯ ಸಾಧನೆ ದಾಖಲಾಗಿರುವುದು ತುಂಬಾ ಸಂತೋಷ ತಂದಿದೆ.
-ಕೀರ್ತಿ ನಿಂಗಣ್ಣ ಹೊಸಮನಿ ಸತ್ಯಂಪೇಟೆ ಮೆಹೆಂದಿ ಕಲೆಯ ಸಾಧಕಿ






