ಒಳಮೀಸಲಾತಿ ಹಂಚಿಕೆಯಲ್ಲಿ ಕಾಂಗ್ರೆಸ್ ನಿಂದ ಅನ್ಯಾಯ : ಮಾಜಿ ಸಂಸದ ಉಮೇಶ್ ಜಾಧವ್ ಆರೋಪ

ಯಾದಗಿರಿ: ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿ ಹಂಚಿಕೆ ಮಾಡದೆ ಬಂಜಾರ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಆರೋಪಿಸಿದರು.
ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಿತ್ತು. ಆದರೆ ಈಗ ಸರ್ಕಾರ ಮತ್ತೆ ಒಳವಿಂಗಡಣೆ ಮಾಡಿ ಸಮುದಾಯಗಳಿಗೆ ದ್ರೋಹ ಬಗೆದಿದೆ.
ಸದಾಶಿವ ಆಯೋಗದ ವರದಿಗಿಂತ ನಾಗಮೋಹನದಾಸ್ ವರದಿ ಹೆಚ್ಚು ಅಪಾಯಕಾರಿಯಾಗಿದೆ. ಸರ್ಕಾರ ವರದಿ ಪರಿಶೀಲಿಸದೆ ಹಂಚಿಕೆ ಮಾಡಿ ನಮ್ಮ ಸಮುದಾಯಗಳನ್ನು ಬಲಿಪಶು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕವಾಗಿ ರೂಪಿಸಿರುವ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲಿಸಿ ವೈಜ್ಞಾನಿಕ ಆಧಾರದ ಮೇಲೆ ನ್ಯಾಯಯುತವಾಗಿ ನೀಡಬೇಕು. ಇಲ್ಲವಾದಲ್ಲಿ ಸಮುದಾಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಿದೆ ಎಂದು ಡಾ.ಜಾಧವ್ ಎಚ್ಚರಿಸಿದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ಒಳಮಿಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದ್ದು, ಕೂಡಲೇ ಸರಿಪಡಿಸಬೇಕು. ನಿರ್ಲಕ್ಷ್ಯವಹಿಸಿದರೇ ಹೋರಾಟಗಳನ್ನು ಮಾಡಲಾಗುವುದೆಂದು ಎಚ್ಚರಿಸಿದರು.
ಈ ವೇಳೆ ಸಮಾಜದ ಪ್ರಮುಖರಾದ ದೇವರಾಜ ನಾಯಕ, ಜನಾರ್ಧನ ರಾಠೋಡ್, ಕಿಶನ, ರವಿ ರಾಠೋಡ್ ಮುದ್ನಾಳ್, ಕಿಶನ ರಾಠೋಡ್, ಲಿಂಬಾ ನಾಯಕ, ಸುರೇಶ ಚವ್ಹಾಣ, ಸುರೇಶ ರಾಠೋಡ, ಬಂಗಾರು ರಾಠೋಡ, ಸುನೀತಾ ಚವ್ಹಾಣ ಸೇರಿದಂತೆ ಇತರರಿದ್ದರು.






