ಚಿಂಚನಸೂರರಿಗೆ ಅವಮಾನ–ಅಹಿಂದ ನಾಯಕರು ಆಕ್ರೋಶ

ಯಾದಗಿರಿ: ಗುರುಮಠಕಲ್ ತಾಲೂಕು ಪ್ರಜಾಸೌಧ ಕಟ್ಟಡದ ಅಡಿಗಲ್ಲು ಕಾರ್ಯಕ್ರಮದಲ್ಲಿ ನಡೆದ ಘಟನೆಯ ಕುರಿತಂತೆ ಶಾಸಕ ಶರಣಗೌಡ ಕಂದಕೂರ ಅವರ ವಿರುದ್ಧ ಅಹಿಂದ ನಾಯಕರು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಹಿಂದ ಜಿಲ್ಲಾ ಅಧ್ಯಕ್ಷ ಹನುಮೇಗೌಡ ಮರಕಲ್ ಹಾಗೂ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಅವರು, ಮಾಜಿ ಸಚಿವ ಬಾಬುರಾವ್ ಚಿಂಚನಸೂರರ ವಿರುದ್ಧ ಶಾಸಕ ಕಂದಕೂರ ತೋರಿದ ವರ್ತನೆಯನ್ನು “ಶಿಷ್ಟಾಚಾರದ ಉಲ್ಲಂಘನೆ” ಎಂದು ಖಂಡಿಸಿದರು.
ಕಾರ್ಯಕ್ರಮಕ್ಕೆ ಚಿಂಚನಸೂರ ಬರುವ ಮುನ್ನವೇ ಶಾಸಕರು ಅಡಿಗಲ್ಲು ಪೂಜೆ ನೆರವೇರಿಸಿದ್ದು, ತಹಶೀಲ್ದಾರರ ಮನವಿಗೂ ಸ್ಪಂದಿಸದೇ, ಹಿರಿಯ ನಾಯಕರ ಹೆಸರು ಏಕವಚನದಲ್ಲಿ ಉಲ್ಲೇಖಿಸಿ ಅಗೌರವ ತೋರಿದ್ದಾರೆ. “ಇದು ಸಾರ್ವಜನಿಕವಾಗಿ ನಡೆದ ಹಿರಿಯ ನಾಯಕರ ಅವಮಾನ” ಎಂದು ಮರಕಲ್ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಚಿಂಚನಸೂರ ಮಾತನಾಡುವ ವೇಳೆ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿದ ಸಂದರ್ಭದಲ್ಲಿ ಶಾಸಕರು ನಯವಾಗಿ ಮಾತನಾಡಿದರೂ, ಇದರ ಹಿಂದೆ ಶಾಸಕರೇ ಸೂತ್ರಧಾರರಾಗಿದ್ದರೆಂಬ ಶಂಕೆ ವ್ಯಕ್ತವಾಗಿದೆ. “ಜನಪ್ರತಿನಿಧಿಯಾಗಿರುವ ಜವಾಬ್ದಾರಿ ಮರೆತು, ಪಾಳೆಗಾರರಂತೆ ವರ್ತಿಸಿರುವ ಶಾಸಕರು ಸಾರ್ವಜನಿಕ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಅಹಿಂದ ಒಕ್ಕೂಟದಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು” ಎಂದು ಮಲ್ಲಿಕಾರ್ಜುನ ಪೂಜಾರಿ ಎಚ್ಚರಿಸಿದರು.





