ಯಾದಗಿರಿ ಜಿಲ್ಲೆಯ ಜನರಿಗೆ ಕಲುಷಿತ ನೀರು ಕುಡಿಸುತ್ತಿರುವ ಜಿಲ್ಲಾಡಳಿತ?
ಆಮೆಗತಿಯಲ್ಲಿ ಸಾಗುತ್ತಿರುವ ಹೊಸ ಜಾಕ್‌ವೆಲ್ ಕಾಮಗಾರಿ

ಯಾದಗಿರಿ : ಇಡೀ ಯಾದಗಿರಿ ನಗರದ ವಿವಿಧ ಬಡಾವಣೆಗಳ ಚರಂಡಿಯ ಕಲುಷಿತ ನೀರು ಭೀಮಾ ನದಿಗೆ ಸೇರುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಭೀಮಾ ನದಿಯಿಂದ ನಗರಕ್ಕೆ ಇದೇ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನದಿಯ ನೀರು ಸಿಂಗಲ್ ಫಿಲ್ಟರಾಗಿ ಬರುವುದರಿಂದ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಕಲುಷಿತ ನೀರೆ ಗತಿಯಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಸದ್ಯ ಕೆ.ಕೆ. ಭಾಗದಲ್ಲಿ ರಣ ಬೇಸಿಗೆ ಸಮೀಪಿಸುತ್ತಿದೆ. ಜನರಿಗೆ ಕುಡಿಯುವ ನೀರಿನ ಅಭಾವದ ಜೊತೆಗೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಯಾದಗಿರಿ ಜಿಲ್ಲೆಯ ಜನರಿಗೆ ಹೆಚ್ಚು ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈಗಂತೂ ಕಲುಷಿತ ನೀರು ಜನರು ಸೇವಿಸುತ್ತಿದ್ದಾರೆ ಮತ್ತು ನಿತ್ಯ ಕಲುಷಿತಗೊಂಡ ನೀರು ಸೇವನೆಯಿಂದ ಹಲವು ರೋಗಕ್ಕೆ ಜಿಲ್ಲೆಯ ಜನರು ತುತ್ತಾಗುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ.
2022 ಅ.26ರಂದು ಜಿಲ್ಲೆಯ ಶಹಾಪುರ ತಾಲೂಕಿನ ಹೊತ್‌ಪೇಟ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದು, ಸುಮಾರು 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. 2023 ಆಗಸ್ಟ್‌ನಲ್ಲಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗಾಜರಕೋಟ ಹಾಗೂ ಶಿವಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 19 ಜನರಿಗೆ ವಾಂತಿ ಭೇದಿಯಾಗಿತ್ತು. ಅದೇ ಗುರುಮಿಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮಹಿಳೆಯರು ಮೃತಪಟ್ಟು 40ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿರುವುದು ಕೂಡ ವರದಿಯಾಗಿದೆ. 2024ರ ಜೂನ್‌ನಲ್ಲಿ ಸುರಪುರ ತಾಲೂಕಿನ ಮೂದನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 14 ಜನರು ಅಸ್ವಸ್ಥರಾಗಿ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದರು. ಜಿಲ್ಲೆಯಲ್ಲಿ ಇಷ್ಟೆಲ್ಲ ಪ್ರಕರಣಗಳು ದಾಖಲಾದರೂ ಜಿಲ್ಲಾಡಳಿತ ನೇರವಾಗಿ ನದಿಗೆ ಹರಿಬಿಡುತ್ತಿರುವ ಕಲುಷಿತ ನೀರು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಬಂದ್ :
ನಗರದ 17-18 ವಾರ್ಡ್‌ಗಳ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ ಅದು ಯಾವುದೇ ರೀತಿ ಪ್ರಯೋಜನೆ ಇಲ್ಲದೇ ವಾರ್ಡ್‌ನ ಜನರು ಕುಡಿಯುವ ನೀರನ್ನು ಬೇರೆಡೆಯಿಂದ ತರುವುದು ಅನಿವಾರ್ಯವಾಗಿದೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಹೊಸ ಜಾಕ್‌ವೆಲ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ದುರಸ್ಥಿ ಕಾಮಗಾರಿ ಸದ್ಯ ಆಮೆ ಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಜಾಕ್‌ವೆಲ್ ವರ್ಕ್ ಆರ್ಡರ್ ಕೊಟ್ಟಿದ್ದು, ಕಾಮಗಾರಿಯು ಶುರುವಾಗಿದೆ. ವಿಪತ್ತು ನಿರ್ವಹಣಾ ಮೀಟಿಂಗ್ ಮಾಡಿದಾಗ ಕುಡಿಯುವ ನೀರಿನ ಕಾಮಗಾರಿಗಳು ಬೇಸಿಗೆ ಮುಗಿಯುವ ಒಳಗಾಗಿ ಪೂರ್ಣ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇವೆ.
-ಡಾ.ಸುಶೀಲಾ ಬಿ., ಜಿಲ್ಲಾಧಿಕಾರಿ ಯಾದಗಿರಿ
ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಮೊದಲು ಬಗೆಹರಿಸುವ ಕೆಲಸವಾಗಬೇಕು. ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿ ಮುಂದಾಗಬೇಕು.
-ಟಿ.ಎನ್.ಭೀಮುನಾಯಕ, ಕರವೇ ಜಿಲ್ಲಾಧ್ಯಕ್ಷ
ಯಾದಗಿರಿ ನಗರದ ಚರಂಡಿಯ ನೀರು ನದಿಗೆ ಹರಿಬಿಡಲಾಗುತ್ತಿದೆ. ನಗರದ ಜನರು ಕುಡಿಯುವುದಕ್ಕೆ ಮತ್ತು ಇತರ ಬಳಕೆಗೆ ಇದೇ ನೀರನ್ನು ಉಪಯೋಗಿಸುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
-ಮರೆಪ್ಪ ಚಟ್ಟೇರಕರ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ







