2028ಕ್ಕೆ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ, ಕುಮಾರಣ್ಣ ಮತ್ತೆ ಸಿಎಂ: ನಿಖಿಲ್ ಕುಮಾರಸ್ವಾಮಿ

ಯಾದಗಿರಿ: ರಾಜ್ಯದಲ್ಲಿ ಮುಂಬರುವ 2028ರಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಪೂರ್ಣ ಪ್ರಮಾಣದ ಸರ್ಕಾರ ರಚನೆಗೊಂಡು ಕುಮಾರಣ್ಣ (ಎಚ್.ಡಿ. ಕುಮಾರಸ್ವಾಮಿ) ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇಲ್ಲಿನ ಯರಗೋಳ್ ರಸ್ತೆಯಲ್ಲಿನ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಜೆಡಿಎಸ್ ಆಯೋಜಿಸಿದ್ದ ʼಜನರೊಂದಿಗೆ ಜನತಾದಳʼ ಮತ್ತು ಸದಸ್ಯತ್ವ ನೊಂದಣಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಳ್ಳುವ ಮೂಲಕ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ, ಆ ಮೂಲಕ ಮುಂದಿನ ಚುನಾವಣೆಯಲ್ಲಿ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಅಧಿಕಾರಕ್ಕೆ ಬಂದು ರೈತರ, ಮಹಿಳೆಯರ ಮತ್ತು ಯುವಕರ ಆಶಾಕಿರಣವಾಗಿ ಕೆಲಸ ಮಾಡುವ ಇಚ್ಛೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರದ್ದು ಆಗಿದೆ ಎಂದರು.
ರಾಜ್ಯದ ಎಲ್ಲಡೆ ಸುಮಾರು 50 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದ್ದು, ಇಲ್ಲಿ ಸೇರಿದಂತಹ ಎಲ್ಲರೂ ಮಿಸ್ ಕಾಲ್ ಕೊಡುವ ಸದಸ್ಯತ್ವ ಪಡೆಯರಿ ಮತ್ತು ಬೂತ್ ಮಟ್ಟದಲ್ಲಿ ಕೂಡಾ ಸದಸ್ಯತ್ವ ಮಾಡಿಸಿರಿ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ ಎಂದ ನಿಖಿಲ್ ಕುಮಾರಸ್ವಾಮಿ, ಕಾನೂನು ಬಾಹಿರ ಕೆಲಸಗಳನ್ನು ತಡೆಯುತ್ತಿರುವ ಮಂಡ್ಯದ ಮೂಲದ ಇಲ್ಲಿನ ಎಸ್ ಪಿ ಪ್ರಥ್ವಿಕ್ ಶಂಕರ್ ಅವರನ್ನು ಕಾಂಗ್ರೆಸ್ ನ ಕೆಲವು ಪ್ರಭಾವಿಗಳು ವರ್ಗ ಮಾಡಿಸಲು ಮುಂದಾಗಿರುವ ವಿಷಯವೇ ಸಾಕು. ಈ ಸರ್ಕಾರಕ್ಕೆ ಎಂತಹ ಅಧಿಕಾರಿಗಳು ಬೇಕು ಎಂಬುವುದು ತಿಳಿಯುತ್ತದೆ ಎಂದು ನಿಖಿಲ್ ಚಾಟಿ ಬೀಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಜೆಡಿಎಸ್ ಕಥೆ ಮುಗಿದು ಮುಗಿದೋಯ್ತು ಅಂತಾರೆ. ಆದರೆ ನಿಮ್ಮ ಪಕ್ಷ ಎಷ್ಟು ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ಅವರು ಕಾಂಗ್ರೆಸ್ ಅನ್ನು ಪ್ರಶ್ನಿಸಿದರು. ನೂರು ವರ್ಷ ಇತಿಹಾಸ ಇರುವ ಕಾಂಗ್ರೆಸ್ ಮೂರು ರಾಜ್ಯಕ್ಕೆ ಸೀಮಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದ ಜೊತೆ ಗಟ್ಟಿಯಾಗಿ ನಿಂತಿದ್ದು ಕಂದಕೂರ ಕುಟುಂಬ. ಮಾಜಿ ಪ್ರಧಾನಿಗಳು ದೇವೇಗೌಡರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಎಷ್ಟೇ ತೊಂದರೆ, ಸಂಕಷ್ಟಗಳು ಎದುರಾದರು ಪಕ್ಷದ ಜೊತೆ ಗಟ್ಟಿಯಾಗಿ ನಿಂತಿದ್ದು ಕಂದಕೂರ ಕುಟುಂಬ. ದಿ. ಸದಾಶಿವ ರೆಡ್ಡಿ ಕಂದಕೂರು, ದಿ. ನಾಗನಗೌಡ ಕಂದಕೂರು ಅವರ ಪಕ್ಷ ನಿಷ್ಠೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಶರಣಗೌಡ ಮಾನಸ ಪುತ್ರ:
ಕುಮಾರಣ್ಣನಿಗೆ ನಾನೊಬ್ಬನೇ ಮಗ ನಿಜ. ಆದರೆ ಶರಣಗೌಡ ಕಂದಕೂರ ಮಾನಸಪುತ್ರ, ಮಗನ ಸಮಾನ. ಬೇರೆ ಬೇರೆ ಪಕ್ಷದಲ್ಲಿ ಅಧಿಕಾರ ಅನುಭವಿಸುತ್ತಿರುವ 50ಕ್ಕೂ ಹೆಚ್ಚು ಶಾಸಕರು, ಸಚಿವರು ಜೆಡಿಎಸ್ ಪಕ್ಷದ ಪಳೆಯುಳಿಕೆಗಳೇ. ನಮ್ಮ ಪಕ್ಷದಲ್ಲಿ ಅಧಿಕಾರ ಅನುಭವಿಸಿ. ಈಗ ಬೇರೆ ಪಕ್ಷಕ್ಕೆ ಹೋಗಿ ನಮ್ಮ ಪಕ್ಷದ ಬಗ್ಗೆನೇ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕರ್ತರ ಕಷ್ಟ, ನೋವು ಕೇಳಲು ರಾಜ್ಯ ಪ್ರವಾಸ:
ಜೆಡಿಎಸ್ ಪಕ್ಷದಿಂದ ಸಾಕಷ್ಟು ಜನ ಶಾಸಕರಾಗಿದ್ರು. ಎರಡು ರಾಷ್ಟ್ರೀಯ ಪಕ್ಷಗಳ ಬಹುತೇಕ ಶಾಸಕರು, ಸಚಿವರಾದವರು ಜನತಾದಳದ ಔಟ್ ಪುಟ್ ಗಳು. ಹಿಂದಿನ ರಾಜಕೀಯ, ಈಗಿನ ರಾಜಕೀಯಕ್ಕೆ ಅಧಿಕಾರ, ಹಣದ ಆಸೆಗೆ ಪಕ್ಷವನ್ನು ತ್ಯಜಿಸಿರಬಹುದು ಆದರೆ ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿಗೆ ಬೆಂಬಲವಾಗಿ ನಿಂತಿರುವುದು ಕಂದಕೂರು ಕುಟುಂಬ ಎಂದು ಹೇಳಿದರು.
ಗುರುಮಠಕಲ್ ಕ್ಷೇತ್ರ ಬೀಡುವ ಪ್ರಶ್ನೆಯೇ ಇಲ್ಲ: ಶಾಸಕ ಶರಣಗೌಡ ಸ್ಪಷ್ಟನೆ
ಗುರುಮಠಕಲ್ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ. ಇದ್ದರೂ ಅಲ್ಲಿಯೇ, ಸತ್ತರೂ ಅಲ್ಲಿಯೇ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.
ಜನರೊಂದಿಗೆ ಜನತಾದಳ ಮತ್ತು ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುಮಠಕಲ್ ಕ್ಷೇತ್ರ ತೊರೆಯುತ್ತಾರೆಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ಅವರು, ನಮ್ಮ ತಂದೆ ಮತ್ತು ನನಗೂ ರಾಜಕೀಯ ನೆಲೆ ಒದಗಿಸಿ ಶಾಸಕರನ್ನಾಗಿ ಮಾಡಿದ ಗುರುಮಠಕಲ್ ಕ್ಷೇತ್ರದ ಜನತೆ ಋಣ ಸಾಕಷ್ಟಿದೆ. ಕಾರಣ ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬಾರದೆಂದರು. ಮುಂದೇ ರಾಜ್ಯದಲ್ಲಿ ನಮ್ಮಸರ್ಕಾರ ಬರುತ್ತೆ, ಕುಮಾರಣ್ಣ ಅವರು ಸಿಎಂ ಆಗುತ್ತಾರೆ. ನಮಗೆ ಮಂತ್ರಿ ಮಾಡುವ ಬದಲು ನಮ್ಮ ಗೆಲುವಿಗೆ ಹಗಲಿರುಳು ದುಡಿದು ಏನೊಂದು ಆಶೆ ಪಡದ ಕಾರ್ಯಕರ್ತರ ಒಳಿತಿಗಾಗಿ ಸರ್ಕಾರದಿಂದ ಸಹಾಯ ಮಾಡಬೇಕು. ಸ್ಥಳಿಯವಾಗಿ ಅಧಿಕಾರ ನೀಡಬೇಕೆಂಬ ಮನವಿ ಶಾಸಕ ಶರಣಗೌಡ ಮಾಡಿದರು
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ದೇವೇಗೌಡರಿಂದಾಗಿಯೇ ಈ ಭಾಗ ನೀರಾವರಿ ಕಂಡಿದೆ ಮತ್ತು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು. ಈ ಕುಟುಂಬ ಜನರ ಪರ ಇದೆ. ಮತ್ತೇ ಕುಮಾರಣ್ಣ ಸಿಎಂ ಆಗಬೇಕು.ನಂತರ ರಾಜ್ಯದ ಅಭಿವೃದ್ಧಿ ದಿಕ್ಕನ್ನೇ ಬದಲಿಸುತ್ತಾರೆಂದರು.
ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್,ರಾಜಾ ವೆಂಕಟಪ್ಪ ನಾಯಕ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಮಾತನಾಡಿದರು. ಜಿಲ್ಲಾಧ್ಯಕ್ಷ ಸುಭಾಷ್ ಕಟಕಟಿ ಸ್ವಾಗತಿಸಿದರು.
ವೇದಿಕೆಯಲ್ಲಿ ಇದ್ದ ಪ್ರಮುಖರು ವೇದಿಕೆಯಲ್ಲಿ ತಾಲೂಕು ಅಧ್ಯಕ್ಷ ಪ್ರಕಾಶ ನಿರೆಟಿ, ಹಿರಿಯ ಮುಖಂಡರಾದ ಎಸ್. ಬಿ.ಪಾಟೀಲ್, ಅನ್ಸಾರಿ ಪಟೇಲ್, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಸಿರವಾಳ, ಮಹಿಳಾ ಅಧ್ಯಕ್ಷೆ ನಾಗರತ್ನ ಅನಪುರ, ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ವಕ್ತಾರ ಮಲ್ಲಣ್ಣಗೌಡ ಕೌಳೂರು ಸೇರಿದಂತೆಯೇ ಅನೇಕರು ಇದ್ದರು. ಆರಂಭದಲ್ಲಿ ಕುಂಭ ಹೊತ್ತ ನೂರಾರು ಮಹಿಳೆಯರು ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.