ಬೆಲೆ ಏರಿಕೆ ಖಂಡಿಸಿ ಯಾದಗಿರಿಯಲ್ಲಿ ಜೆಡಿಎಸ್ನಿಂದ ಬೃಹತ್ ಬೈಕ್ ರ್ಯಾಲಿ

ಯಾದಗಿರಿ : ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಜಾತ್ಯತೀತ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷಚಂದ್ರ ಕಟಕಟಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಬೆಳಗ್ಗೆ 11ಕ್ಕೆ ನಗರದ ಹೊಸ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು, ‘ನಾವು ಹಳ್ಳಿ ಗುಗ್ಗುಗಳು ಏನಿವಾಗ?’ ಎಂಬ ಬರಹವಿರುವ ಟಿ-ಶರ್ಟ್ಗಳನ್ನು ಧರಿಸಿ ಬೈಕ್ಗಳಲ್ಲಿ ರ್ಯಾಲಿ ಆರಂಭಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೊಸಳ್ಳಿ ಕ್ರಾಸ್, ಗಂಜ್ ಏರಿಯಾ, ಮೈಲಾಪುರ ಅಗಸಿ, ಗಾಂಧಿ ಚೌಕ್, ವೀರಶೈವ ಕಲ್ಯಾಣ ಮಂಟಪ ಮಾರ್ಗ, ಡಾ. ಅಂಬೇಡ್ಕರ್ ವೃತ್ತ ಹಾಗೂ ಶಾಸ್ತ್ರಿ ಚೌಕ್ ಮೂಲಕ ಸುಭಾಷ್ ವೃತ್ತಕ್ಕೆ ಆಗಮಿಸಿದರು. ದಾರಿಯುದ್ದಕ್ಕೂ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಯುವ ಕಾರ್ಯಕರ್ತರು ‘ನಾವು ಹಳ್ಳಿ ಗುಗ್ಗುಗಳು ಏನಿವಾಗ್?’ ಎಂದು ಘೋಷಣೆ ಕೂಗುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಟಾಂಗ್ ನೀಡಿದರು. ಸುಭಾಷ್ ವೃತ್ತದಲ್ಲಿ ಸಾವಿರಾರು ಜನರು ಜಮಾಯಿಸಿ, ಸುತ್ತುವರಿದು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಬೈಕ್ಗಳೊಂದಿಗೆ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಬೈಕ್ ರ್ಯಾಲಿಯಲ್ಲಿ ಸಾವಿರಾರು ಯುವ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ತಮ್ಮ ನಾಯಕ ಶಾಸಕ ಶರಣಗೌಡ ಕಂದಕೂರ ಅವರ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ರ್ಯಾಲಿಗೆ ಮತ್ತಷ್ಟು ಉತ್ಸಾಹ ತುಂಬಿದರು. ನಗರದ ವಿವಿಧೆಡೆ ಸಂಚರಿಸಿದ ಕಾರ್ಯಕರ್ತರು ಅಲ್ಲಲ್ಲಿ ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ ಮಾತನಾಡಿ, ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರ ಅನುಭವಿಸಿದವರು ಹಳ್ಳಿಯವರೇ ಆಗಿದ್ದಾರೆ. ಹಳ್ಳಿಯ ಜನರಿಂದ ಮತ ಪಡೆದು ಐವತ್ತು ವರ್ಷಗಳಿಂದ ತಂದೆ-ಮಗ ಅಧಿಕಾರ ಅನುಭವಿಸುತ್ತಿದ್ದರೂ, ಹಳ್ಳಿಗರನ್ನು ‘ಹಳ್ಳಿ ಗುಗ್ಗುಗಳು’ ಎಂದು ಕರೆಯುತ್ತೀರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದರು.
ಪ್ರಿಯಾಂಕ್ ಖರ್ಗೆ ಅವರಿಂದ ಗೃಹ ಖಾತೆಯನ್ನು ವಾಪಸ್ ಪಡೆದು, ಅವರಿಗೆ ‘ಮಾತಿನ ಮಲ್ಲ’ ಎಂಬ ಖಾತೆಯನ್ನು ಸೃಷ್ಟಿಸಿ ನೀಡಬೇಕು. ಮಾತನಾಡಿದರೆ ಸಾಕು, ಪ್ರಧಾನಿ ಮೋದಿ, ಕುಮಾರಸ್ವಾಮಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸುವುದೇ ಅವರ ಕೆಲಸವಾಗಿದೆ. ಗೃಹ ಖಾತೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ನಿಮಗೂ, ನಿಮ್ಮ ತಂದೆಗೂ ತಕ್ಕ ಪಾಠ ಕಲಿಸಲು ಹಳ್ಳಿಗಳ ಜನರು ಸಿದ್ಧರಾಗಿದ್ದಾರೆ. ₹2,500 ಪರಿಹಾರದ ಹಣದಲ್ಲಿಯೂ ಕಡಿತ ಮಾಡಿದ ಪಾಪರ್ ಸರ್ಕಾರ ಇದಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನೂ ಖಾತೆಗಳಿಗೆ ಜಮೆ ಮಾಡುತ್ತಿಲ್ಲ. ಇದರಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರೇರಣೆ ತುಂಬಿದ ಶಾಸಕ ಶರಣಗೌಡ ಕಂದಕೂರ ಅವರಿಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ಜನರ ದೈನಂದಿನ ಬದುಕನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರದ ನಡೆಯನ್ನು ಖಂಡಿಸಿದರು. ಬಸ್ ದರವನ್ನು ಮೇಲಿಂದ ಮೇಲೆ ಏರಿಸುವ ಮೂಲಕ ಜನರನ್ನು ತೊಂದರೆಗೆ ಸಿಲುಕಿಸಲಾಗಿದೆ. ಹಣವಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳೇ, ನಿಮಗೆ ಗ್ಯಾರಂಟಿ ಯೋಜನೆಗಳನ್ನು ನೀಡುವಂತೆ ಯಾರು ಕೇಳಿದ್ದರು? ಹಳ್ಳಿಯಿಂದ ಹಳ್ಳಿಗೆ ನಡೆದುಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ದರ ಏರಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ತೆರಿಗೆಯನ್ನೂ ದ್ವಿಗುಣಗೊಳಿಸಲಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪೂರ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಪ್ರತಿ ಬಾರಿಯೂ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ರೈತರನ್ನು ಹೈರಾಣಾಗಿಸುತ್ತಿದೆ. ಪರಿಹಾರದ ಮೊತ್ತದ ಬಗ್ಗೆ ಒಂದೊಂದು ಬಾರಿ ಒಂದೊಂದು ಮಾಹಿತಿ ನೀಡುತ್ತಾ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಜನರನ್ನು ‘ಹಳ್ಳಿ ಗುಗ್ಗುಗಳು’ ಎಂದು ಕರೆಯುವ ಕಾಂಗ್ರೆಸ್ ನಾಯಕರಿಗೆ ಧಿಕ್ಕಾರ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸರ್ಕಾರ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.
ಜೆಡಿಎಸ್ ಮುಖಂಡರಾದ ವಿಶ್ವನಾಥ ಶಿರವಾರ, ತಾಯಪ್ಪ ಬದ್ದೇಪಲ್ಲಿ ಹಾಗೂ ಶ್ರೀಕಾಂತ ಸುಬೇದಾರ ಮಾತನಾಡಿ, ಭ್ರಷ್ಟ ಸರ್ಕಾರದಿಂದ ಬೆಲೆ ಏರಿಕೆಯಾಗದೆ ಮತ್ತೇನು ಆಗಲು ಸಾಧ್ಯ? ಮತ ಹಾಕಿದ ಜನರನ್ನೇ ‘ಹಳ್ಳಿ ಗುಗ್ಗುಗಳು’ ಎಂದು ಕರೆಯುವ ಕಾಂಗ್ರೆಸ್ ನಾಯಕರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಮಾತೆಪ್ಪ ಕಂದಕೂರ, ಲಕ್ಷ್ಮರಡ್ಡಿ ಅನಪೂರ, ಅಜಯರಡ್ಡಿ ಎಲ್ಹೇರಿ, ಮಲ್ಲಣಗೌಡ ಕೌಳೂರ, ಬಸವರಾಜಪ್ಪ ಗೊಂದೆಡಗಿ, ರಾಮಣ್ಣ ಕೊಟಗೇರಾ, ಬಸಣ್ಣ ದೇವರಹಳ್ಳಿ, ರವಿಪಾಟೀಲ, ಶರಣು ಆವಂಟಿ, ದೊಡ್ಡಣಗೌಡ ಅರಕೇರಾ, ಹಣಮಂತ ಅಕ್ಕಿ, ಪರಿಮಳ ಚಾಮನಳ್ಳಿ, ಸೋಮನಗೌಡ ಬೆಳಗೇರಾ, ಪರಮರಡ್ಡಿ ಕಂದಕೂರ, ಭೀಮಶಪ್ಪ ಗುಡಸೆ, ಭೀಮರಾಯ ಬದ್ದೇಪಲ್ಲಿ, ಸಾಹೇಬಗೌಡ ಗೌಡಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಡುಬಿಸಿಲನ್ನೂ ಲೆಕ್ಕಿಸದೆ ರ್ಯಾಲಿ :
ಸುಡುಬಿಸಿಲನ್ನೂ ಲೆಕ್ಕಿಸದೆ ಕಾರ್ಯಕರ್ತರು ನಗರದ ವಿವಿಧೆಡೆ ಸಂಚರಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
‘ನಾವು ಹಳ್ಳಿ ಗುಗ್ಗುಗಳು ಏನಿವಾಗ?’ :
ಬೆಲೆ ಏರಿಕೆ ಖಂಡಿಸಿ ನಡೆದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ‘ನಾವು ಹಳ್ಳಿ ಗುಗ್ಗುಗಳು ಏನಿವಾಗ್?’ ಎಂಬ ಬರಹವಿರುವ ಟಿ-ಶರ್ಟ್ಗಳನ್ನು ಧರಿಸಿದ್ದರು. ಪ್ರತಿಭಟನಾ ಮಾರ್ಗದುದ್ದಕ್ಕೂ ಯುವಕರು ಈ ಘೋಷಣೆ ಕೂಗುತ್ತಾ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಖಂಡಿಸುವ ಉದ್ದೇಶದಿಂದ ಈ ರೀತಿಯ ಪ್ರತಿಭಟನೆ ನಡೆಸಿದರು.






