ಸಾಮಾಜಿಕ ಬದ್ಧತೆಯಿಂದ ಪತ್ರಕರ್ತರು ಕಾರ್ಯನಿರ್ವಹಿಸಲಿ: ಡಾ. ಪಲ್ಲವಿ ಪಾಟೀಲ್

ಹುಣಸಗಿ: ಪತ್ರಿಕೋದ್ಯಮವು ಕೇವಲ ಸುದ್ದಿಯನ್ನು ಪ್ರಕಟಿಸುವ ವೃತ್ತಿಯಲ್ಲ. ಸಮಾಜದ ಆಗುಹೋಗುಗಳನ್ನು ಜನರ ಮುಂದಿಡುವ ಜವಾಬ್ದಾರಿಯುತ ಸೇವೆಯಾಗಿದ್ದು, ಪತ್ರಕರ್ತರು ಸತ್ಯ, ನಿಷ್ಪಕ್ಷಪಾತತೆ ಹಾಗೂ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಸಹಕಾರ್ಯದರ್ಶಿ ಡಾ. ಪಲ್ಲವಿ ಪಾಟೀಲ್ ಹೇಳಿದರು.
ಪಟ್ಟಣದ ಸುಬ್ಬಮ್ಮ ಗೌಡತಿ ಮಂಗಲ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹುಣಸಗಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ–2026 ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ಪ್ರದಾನ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳ ನಡುವೆಯೂ ಪತ್ರಿಕೋದ್ಯಮ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾಗಿದೆ.
ಸುದ್ದಿಯ ವೇಗಕ್ಕಿಂತ ಅದರ ನಿಖರತೆ ಮತ್ತು ಸತ್ಯಾಸತ್ಯತೆ ಮುಖ್ಯ. ಪತ್ರಕರ್ತರು ಯಾವುದೇ ಒತ್ತಡಕ್ಕೆ ಒಳಗಾಗದೆ ವಾಸ್ತವಾಂಶ ಆಧರಿಸಿ ವರದಿ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರು ಅನೇಕ ಸವಾಲುಗಳ ನಡುವೆಯೂ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದಾರೆ. ಪತ್ರಕರ್ತರ ವೃತ್ತಿಪರ ಕೌಶಲ್ಯ ಹೆಚ್ಚಿಸುವುದರ ಜೊತೆಗೆ ಅವರ ಹಕ್ಕು, ಸುರಕ್ಷತೆ ಹಾಗೂ ಕುಟುಂಬದ ಭದ್ರತೆ ಅವಶ್ಯಕವಾಗಿದೆ ಎಂದರು.
ಉದ್ಯಮಿ ಡಾ.ಎಸ್.ಪಿ. ದಯಾನಂದ ಅವರ ಡಿವಿಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪತ್ರಕರ್ತರು ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಆಡಳಿತ ವ್ಯವಸ್ಥೆಯ ಗಮನ ಸೆಳೆಯಬೇಕು. ಮಹಿಳೆಯರು ಕೂಡ ಪತ್ರಿಕೋದ್ಯಮ ಕ್ಷೇತ್ರಕ್ಕೆ ಆಸಕ್ತಿ ತೋರಬೇಕು ಎಂದು ತಿಳಿಸಿದರು.
ಮುಖಂಡ ಚಂದ್ರಶೇಖರ ದಂಡಿನ ಮಾತನಾಡಿ, ಪತ್ರಿಕೋದ್ಯಮದಲ್ಲಿ ನೈತಿಕತೆ, ವಸ್ತುನಿಷ್ಠತೆ ಮತ್ತು ಸಾಮಾಜಿಕ ಜವಾಬ್ದಾರಿ ಅತ್ಯಂತ ಮುಖ್ಯ. ಹೊಸ ತಲೆಮಾರಿನ ಪತ್ರಕರ್ತರು ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಜೊತೆಗೆ ಪತ್ರಿಕೋದ್ಯಮದ ಮೂಲ ಮೌಲ್ಯಗಳನ್ನು ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಜಿ.ಪಂ ಮಾಜಿ ಸದಸ್ಯರಾದ ಎಚ್.ಸಿ. ಪಾಟೀಲ್ ಹಾಗೂ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸಮಾಜದ ದಿಕ್ಕು-ದೆಸೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳ ಜನರ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳ ಲೋಪದೋಷಗಳು ಹಾಗೂ ಜನಪರ ವಿಚಾರಗಳನ್ನು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಸ್ಥಳೀಯ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರು ವಸ್ತುನಿಷ್ಠ ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ಮೂಲಕ ಸಮಾಜದ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಶ್ರೀ ಮನಿಪ್ರ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚಿಸಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಿವೃತ್ತ ಲೋಕಾಯುಕ್ತ ಡಿವೈಎಸ್ಪಿ ಶಂಕರ್.ಎಂ.ರಾಗಿ(ಕರ್ತವ್ಯ ಸೇವಾ ರತ್ನ ಪ್ರಶಸ್ತಿ), ಡಾ.ಎಸ್.ಪಿ.ದಯಾನಂದ(ಸಹೃದಯ ಸೇವಾ ರತ್ನ ಪ್ರಶಸ್ತಿ), ಪರಮಣ್ಣ ನೀಲಗಲ್(ಶಿಕ್ಷಣ ಪ್ರೇರಕ ಪ್ರಶಸ್ತಿ), ಬಂಸವರಾಜ್ ಅಂಗಡಿ ಕೊಡೇಕಲ್(ಪತ್ರಿಕಾ ರತ್ನ ಪ್ರಶಸ್ತಿ), ಶಿಕ್ಷಕಿ ಗೀತಾ ಕಟ್ಟಿ(ಜ್ಞಾನ ದೀಪ್ತಿ ಪ್ರಶಸ್ತಿ) ವಿತರಿಸಿ ಸತ್ಕರಿಸಲಾಯಿತು. ಈ ವೇಳೆ ನೂತನ ಪದಾಧಿಕಾರಿಗಳ ಪದಗ್ರಹಣ ಮಾಡಲಾಯಿತು.
ಈ ಸಂದರ್ಭ ರಾಜಾ ವಿಜಯಕುಮಾರನಾಯಕ, ರಾಜಾ ಕುಶಾಲ್ ನಾಯಕ, ಸಿದ್ರಾಮಪ್ಪ ಮುದಗಲ್, ಬಸವರಾಜ ಮಲಗಲದಿನ್ನಿ, ವೀರೇಶ ಸಾಹು ಚಿಂಚೋಳಿ, ಸಂಗಣ್ಣ ಸಾಹು ವೈಲಿ, ಬಿ.ಎಂ ಅಳ್ಳಿಕೋಟಿ, ಆರ್.ಎಂ.ರೇವಡಿ, ಮರಲಿಂಗಪ್ಪ ನಾಟೇಕರ್, ಗೌಡಪ್ಪ ಬಾಲಗೌಡರ್ , ಗುಂಡು ಅಂಗಡಿ, ಮೇಲಪ್ಪ ಗುಳುಗಿ, ಮಲ್ಲು ಹೆಬ್ಬಾಳ, ಬಸವರಾಜ ಮೇಲಿನಮನಿ, ಯೂಸುಫ್ ಡೆಕ್ಕನ್, ಕನಕಪ್ಪ ಸಿದ್ದಾಪುರ, ನಂದಪ್ಪ ಪೀರಾಪುರ ಹಾಗೂ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಕಾನಿಪ ಅಧ್ಯಕ್ಷ ಬಾಲಪ್ಪ ಕುಪ್ಪಿ, ಪತ್ರಕರ್ತರಾದ ಬಸವರಾಜ್ ಶಾರದಳ್ಳಿ, ಚಂದ್ರಶೇಖರ ನಾಯ್ಡು, ಶಾಂತಿನಾಥ ವನಕುದರಿ, ಸಿದ್ದನಗೌಡ ಬಿರಾದಾರ ಸೇರಿದಂತೆ ಅನೇಕರು ಇದ್ದರು. ಪತ್ರಕರ್ತ ಮಲ್ಲಿಕಾರ್ಜುನ ಗುತ್ತೇದಾರ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಪತ್ರಕರ್ತ ಬಾಪುಗೌಡ ಮೇಟಿ ವಂದಿಸಿದರು.






