ಕನಕದಾಸರು ಸಾಮಾಜಿಕ ಕಳಕಳಿಯ ಮಹಾನ್ ದಾರ್ಶನಿಕರು : ಶಾಸಕ ಚನ್ನಾರೆಡ್ಡಿ ಪಾಟೀಲ್

ಯಾದಗಿರಿ: ಭಕ್ತ ಕನಕದಾಸರು ಪರಿಶುದ್ಧ ಭಕ್ತಿ ಮತ್ತು ಸಾಮಾಜಿಕ ಕಳಕಳಿಯಿಂದ ಸ್ಮರಣೀಯರಾಗಿದ್ದಾರೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸರಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಕವಿ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಭಕ್ತ ಕನಕದಾಸರ ಭಾವಚಿತ್ರ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದರು.
ಭಕ್ತ ಕನಕದಾಸರು ಸಾಮಾಜಿಕ ಚಿಂತನೆಗಳ ಹಾದಿಯಲ್ಲಿ ಕ್ರಮಿಸಿದ ದೂರ, ಮಾಡಿದ ಮಹತ್ವದ ಸಾಧನೆಗಳು ಅನುಸ್ಮರಣೀಯವಾಗಿದೆ. ಹರಿದಾಸ ಸಂಕೀರ್ತನೆಗಳನ್ನು ಕೈಗೊಳ್ಳುತ್ತಾ, ಊರು ಕೇರಿಗಳಲ್ಲಿ ಸಂಚರಿಸಿದ ಕನಕದಾಸರು, ಇದೇ ವೇಳೆ ಜೀವನದ ಸಾರ, ಅನುಭವ ದ್ರವ್ಯಗಳ ಮುಖೇನ ಸಮಾಜದ ಸ್ವಾಸ್ಥ್ಯಕ್ಕೆ ಅಗತ್ಯವಾದ ನೀತಿ ಬೋಧನೆಗಳನ್ನು, ತಮ್ಮ ಕೀರ್ತನೆಗಳ ಮೂಲಕ ಜನರಿಗೆ ತಲುಪಿಸಿದರು ಎಂದು ಶಾಸಕರು ಹೇಳಿದರು.
ನಗರದಲ್ಲಿ ಕನಕದಾಸರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವಶ್ಯಕ ನಿವೇಶನ ನಗರಸಭೆಯಿಂದ ಪಡೆದುಕೊಂಡಲ್ಲಿ ಅವಶ್ಯಕ ಅನುದಾನ ಒದಗಿಸಲಾಗುವುದು. ಕನಕ ವೃತ್ತದ ಅಭಿವೃದ್ಧಿಗೂ ಗಮನ ನೀಡಲಾಗುವುದೆಂದು ಸಮಾಜದ ಮುಖಂಡರಿಗೆ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಶ್ರಮ ಸಂಸ್ಕ್ರತಿಯ ವಿವೇಕ, ಚಿಂತನೆಯ ಪ್ರತಿಕದಂತೆಯೇ ಇದ್ದು, ಸಮ ಸಮಾಜವನ್ನು ಕಟ್ಟಿದ ಮಹಾನ್ ದಾರ್ಶನಿಕರಾಗಿದ್ದ ಭಕ್ತ ಕನಕದಾಸರು ವಚನ, ಹಾಡುಗಳ ಮೂಲಕ ಮೂಢನಂಬಿಕೆಗಳನ್ನು ಹೊಗಲಾಡಿಸಿದರೆಂದು ಹೇಳಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ಸಮಾಜದ ಮಕ್ಕಳು ವಿದ್ಯಾವಂತರಾಗಬೇಕು. ವಿದ್ಯೆಯಿಂದಲೇ ಸಮಾಜದಲ್ಲಿ ಮನ್ನಣೆಯಿದೆ. ಕನಕದಾಸರು ಆಗಿನ ಕಾಲದಲ್ಲಿಯೇ ಜ್ಞಾನಿಗಳಾಗಿದ್ದರು. ಅವರ ಬದುಕಿನ ಆರ್ದಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಾಬಣ್ಣ ಜುಬೇರಿ ಅವರು ಕನಕದಾಸರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಸಂತ ಕವಿ ಕನಕದಾಸರ ಜಯಂತಿ ಸಮಿತಿ ಅಧ್ಯಕ್ಷ ಮಲ್ಲಣ್ಣ ಐಕೂರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾಜದ ಹಿರಿಯ ಮುಖಂಡರಾದ ಚಂದ್ರಶೇಖರ ಕಾಡಂನೊರ, ಡಾ. ಭೀಮಣ್ಣಾ ಮೇಟಿ, ಗ್ರಾಮಸ್ಥರು, ಕಾಲೇಜಿ ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದರು. ಭೀಮರಾಯ ಕೊಟ್ಟರಕಿ ಕಾರ್ಯಕ್ರಮ ನಿರೂಪಿಸಿದರು.
ಬಸವರಾಜ ಭಂಟನೂರ ಸಂಗಡಿಗರು ಪ್ರಾರ್ಥನೆ, ನಾಡಗೀತೆ ಹಾಡಿದರು. ಭಕ್ತ ಕನಕದಾಸರ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಹ ಹಮ್ಮಿಕೊಳ್ಳಲಾಗಿತ್ತು.







