ಶೇ. 50ರಷ್ಟು ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಅನ್ಯಾಯ: ಕನ್ನಡ ರಕ್ಷಣಾ ವೇದಿಕೆ ಆರೋಪ

ಯಾದಗಿರಿ: ರೈತರಿಗೆ ಬೆಳೆ ನಷ್ಟ ಸಮೀಕ್ಷೆ ಹಾಗೂ ಪರಿಹಾರ ವಿತರಣೆಯಲ್ಲಿ ಭಾರಿ ಅನ್ಯಾಯವಾಗಿದ್ದು, ಸರಿಪಡಿಸಿ ಎಲ್ಲ ಅರ್ಹ ರೈತರಿಗೆ ಪರಿಹಾರ ನೀಡಲು ಸರಕಾರ ಮುಂದಾಗಬೇಕೆಂದು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ನಾಗಪ್ಪ ಬಿ. ಹೊನಗೇರಾ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ನಾಗಪ್ಪ ಬಿ. ಹೊನಗೇರಾ, ಕಳೆದ ಮಳೆಗಾಲದಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದಾಗಿ ಅಪಾರ ನಷ್ಟವಾಗಿದ್ದರೂ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದೆ ಇರುವುದರಿಂದ ಶೇ. 50 ರಷ್ಟು ರೈತರಿಗೆ ಪರಿಹಾರ ಬಂದಿಲ್ಲ. ಇದರಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯ ಹಾಗೂ ಸರಕಾರದ ಉಪೇಕ್ಷೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಬಹುತೇಕ ರೈತರಿಗೆ ಆಧಾರ ಕಾರ್ಡ್ ಲಿಂಕ್ ಇಲ್ಲ. ಎಫ್.ಐ.ಡಿ. ಆಗಿಲ್ಲ ಎಂದು ಕುಂಟು ನೆಪ ಹೇಳಿ ಶೇ. 50 ರಷ್ಟು ರೈತರಿಗೆ ಅನ್ಯಾಯ ಮಾಡಿರುತ್ತಾರೆ. ಇದರಿಂದ ಈ ಭಾಗದ ಅದರಲ್ಲೂ ಹತ್ತಿಕುಣಿ ಹೋಬಳಿಯಲ್ಲಿ ಇದೇ ರೀತಿ ಸಮೀಕ್ಷೆ ಪರಿಹಾರದ ಕಾರ್ಯದಲ್ಲಿ ಲೋಪ ಮಾಡಿ ಮುಗ್ದ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ರೈತರ ಬೆಳೆ ಸಮೀಕ್ಷೆಯಲ್ಲಿ ಆಗಿರುವ ಲೋಪ ಸರಿಪಡಿಸಬೇಕು ಮತ್ತು ಪರಿಹಾರ ವಿತರಣೆಯ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೂಡಲೇ ಸರಕಾರ ಆಗಿರುವ ಲೋಪ ಸರಿಪಡಿಸಿ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ರಾಯಪ್ಪನೋರ್, ಅಂಬ್ರೇಷ್ ಕುಂಬಾರ, ಗಿರೀಶ ನೀಲಹಳ್ಳಿ, ಅನಿಲ್ ತಡಿಬಿಡಿ, ಭೀಮರಾಯ ಮೂಲಿಮನಿ, ನಾಗೇಶ ಮ್ಯಾಗೇರಿ, ತಿಮ್ಮಣ್ಣ ನಾಯಕ ಬಾಚವಾರ ಎಚ್ಚರಿಕೆ ನೀಡಿದ್ದಾರೆ.







