ಪಂಚ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದೇಶಕ್ಕೆ ಮಾದರಿ: ಸಚಿವ ಶರಣಬಸಪ್ಪ ದರ್ಶನಾಪೂರ

ಯಾದಗಿರಿ: ಕರ್ನಾಟಕ ರಾಜ್ಯ ಸರ್ಕಾರವು ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ತಿಳಿಸಿದ್ದಾರೆ.
ಹಸಿವು ಮುಕ್ತ ಕರ್ನಾಟಕ ರೂಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಅನ್ನಭಾಗ್ಯ ಯೋಜನೆ” ಮೂಲಕ ಬಡಜನರಿಗೆ ಆಹಾರ ಭದ್ರತೆ ಒದಗಿಸಿ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಗೃಹಲಕ್ಷ್ಮಿ ಯೋಜನೆ”ಯು ರಾಜ್ಯದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೀಡಿದ್ದು, “ಗೃಹಜ್ಯೋತಿ ಯೋಜನೆ”ಯಡಿ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಮೂಲಕ ಜನರಲ್ಲಿ ಸಂತೋಷ ಮೂಡಿಸಿದೆ.
ಅದೇ ರೀತಿಯಲ್ಲಿ “ಶಕ್ತಿ ಯೋಜನೆ” ಮಹಿಳೆಯರು, ಯುವತಿಯರು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿ ಆರ್ಥಿಕ ಸಬಲೀಕರಣಕ್ಕೆ ದಾರಿಯಾಗಿದ್ದು, “ಯುವ ನಿಧಿ ಯೋಜನೆ” ನಿರುದ್ಯೋಗಿ ಯುವಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ಹೇಳಿದರು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಕಿರುಹೊತ್ತಿಗೆ ಹೊರತರುತ್ತಿರುವುದು ಸಂತೋಷದ ವಿಷಯವಾಗಿದೆ. ಈ ಯೋಜನೆಗಳ ಮಾಹಿತಿ ಎಲ್ಲ ಜನರಿಗೂ ತಲುಪಲಿ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ಕಾರಣವಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







