ಕೆಂಭಾವಿ | ಭೋಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ವ್ರತಾಚರಣೆಗೆ ಚಾಲನೆ

ಕೆಂಭಾವಿ : ಹಿಂದೂಗಳ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಸ್ಥಳೀಯ ಭೋಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶ್ರಾವಣ ಮಾಸದ ವ್ರತಾಚರಣೆಗೆ ಶ್ರದ್ಧಾ-ಭಕ್ತಿಯಿಂದ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ರಾಜಶೇಖರಯ್ಯ ಸ್ವಾಮಿ ಹಿರೇಮಠ ಮಾತನಾಡಿ, ಶ್ರಾವಣ ಮಾಸದ ಪ್ರತಿಯೊಂದು ಸೋಮವಾರವೂ ಮಂಗಳಕರವಾಗಿದೆ. ಉಪವಾಸ ಹಾಗೂ ಭಕ್ತಿಯ ಆಚರಣೆಯಿಂದ ಆತ್ಮಾವಲೋಕನ ಮೂಡುತ್ತದೆ. ರಜೋ ಮತ್ತು ತಮೋ ಗುಣಗಳು ದೂರವಾಗಿ ಸಾತ್ವಿಕತೆ ವೃದ್ಧಿಸುವುದರೊಂದಿಗೆ ಆಧ್ಯಾತ್ಮಿಕ ಚಿಂತನೆಗೆ ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಶ್ರಾವಣ ಮಾಸದ ವ್ರತಾಚರಣೆಯಿಂದ ಅಧ್ಯಾತ್ಮದ ಒಲವು ಹೆಚ್ಚಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ. ಭಗವಂತನ ಪ್ರಾರ್ಥನೆಯಿಂದ ಅಂತಃಸೌಂದರ್ಯ ವೃದ್ಧಿಯಾಗಿ ಬದುಕಿನಲ್ಲಿ ಸಮೃದ್ಧಿ ದೊರೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಶಾಂತ ಸ್ವಾಮಿ ಹಿರೇಮಠ ಅವರು ಶ್ರಾವಣ ಮಾಸದ ಧಾರ್ಮಿಕ ಮಹತ್ವ ಹಾಗೂ ವ್ರತಾಚರಣೆಯ ನಿಯಮಗಳ ಕುರಿತು ಭಕ್ತರಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಅರ್ಚಕರಾದ ಗಿರೀಶ್ ಅಂಗಡಿ, ಪ್ರಮುಖರಾದ ದೇವು ಹಡಪದ, ಮಲ್ಲಿಕಾರ್ಜುನ ಕುಂಬಾರ, ಗುರುಬಸಪ್ಪ ಕುಂಬಾರ, ಗುರು ಅಂಗಡಿ, ಮಹಾಂತೇಶ ಸೀರಿ, ಮಂಜು ಕುಂಬಾರ, ಮಲ್ಲಿಕಾರ್ಜುನ ಬಿದರಿ ಸೇರಿದಂತೆ 50 ಕ್ಕೂ ಅಧಿಕ ಶ್ರಾವಣ ವ್ರತಾಚಾರಿಗಳು ಹಾಗೂ ಭೋಗೇಶ್ವರ ಸೇವಾದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.






