ಶ್ರೀಕೃಷ್ಣ ಪರಮಾತ್ಮನ ದಾರ್ಶನಿಕ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಬಾಳೋಣ: ಬಾಬುರಾವ್ ಕಾಡ್ಲೂರು

ಯಾದಗಿರಿ: ದ್ವಾಪರ ಯುಗದಲ್ಲಿ ಕೃಷ್ಣ ಪರಮಾತ್ಮನು ನುಡಿದ ಹಿತೋಪದೇಶಗಳನ್ನು ಹಾಗೂ ಅವರ ನಡೆದು ಬಂದ ದಾರಿಯನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಬಾಳೋಣ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರು ಹೇಳಿದರು.
ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿವಿಧ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾದವ ಸಮಾಜದ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ್ ಮಾತನಾಡಿ, ಕೃಷ್ಣ ಪರಮಾತ್ಮನು ಜೀವನದಲ್ಲಿ ನಮಗಿರುವ ಚಿಂತೆಗಳನ್ನು ಭಗವಂತನಿಗೆ ಬಿಟ್ಟು ಕೆಲಸದ ಕಡೆ ಗಮನವಿಟ್ಟು ಕಾಯಕ ಮಾಡು ಫಲಾ ಫಲ ನನಗೆ ಬಿಡು ಎಂದು ಸಾರಿದ್ದು, ಅದರಂತೆ ನಾವು ಜಗತ್ತಲ್ಲಿ ಬಾಳೋಣ ಎಂದರು.
ಈ ವೇಳೆಯಲ್ಲಿ ಸಹಾಯಕ ಆಯುಕ್ತ ಶ್ರೀಧರ್ ಗೊಟೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಾಹಿತಿ ಗುರುಪ್ರಸಾದ್ ವೈದ್ಯ ಶ್ರೀ ಕೃಷ್ಣನ ಹಾಗೂ ಭಗವತ್ಗೀತೆಯ ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂಧರ್ಭದಲ್ಲಿ ಯಾದವ ಸಮಾಜದ ಮುಖಂಡರು ಉಪಸ್ಥಿತರಿದ್ದರು.






