ಯಾದಗಿರಿ| ಮದರಕಲ್ ನಲ್ಲಿ ಲಾರಿ ಪಲ್ಟಿ: ಚಾಲಕನಿಗೆ ಗಂಭೀರ ಗಾಯ

ಯಾದಗಿರಿ: ಮದರಕಲ್ ರಸ್ತೆ ಬಳಿ ಮದ್ಯ ತುಂಬಿದ ಲಾರಿ ಪಲ್ಟಿಯಾಗಿ ಚಾಲಕನಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುವನ್ನು ಸ್ಥಳೀಯರು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.
ಬೀರನೂರ ಕ್ರಾಸ್‌ನಿಂದ ಮದರಕಲ್, ಯಕ್ಷಿಂತಿ, ಹಯ್ಯಾಳ ಬಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
2022–23ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ಮದರಕಲ್ ಗ್ರಾಮದಿಂದ ಬೀರನೂರ ಕ್ರಾಸ್‌ವರೆಗೆ ನಾಲ್ಕು ಕಿಲೋಮೀಟರ್ ರಸ್ತೆ ನಿರ್ಮಾಣ ಕೈಗೊಂಡು ಕೇವಲ ಮೂರು ಕಿಲೋಮೀಟರ್ ಮಾತ್ರ ಪೂರ್ಣಗೊಳಿಸಿದೆ. ಉಳಿದ ಒಂದು ಕಿಲೋಮೀಟರ್ ರಸ್ತೆ ನಿರ್ಮಾಣ ಇನ್ನೂ ಬಾಕಿಯಿದೆ. ಗ್ರಾಮಸ್ಥರು ಹಲವು ಬಾರಿ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಮನವಿ ಸಲ್ಲಿಸಿದ್ದು, ವಿಷಯ ಪತ್ರಿಕೆಗಳಲ್ಲಿ ಪ್ರಕಟವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಆರೋಪಿಸಿದ್ದಾರೆ.
ಜುಲೈ 18ರಂದು ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನುರು ಅವರಿಗೆ ಗ್ರಾಮಸ್ಥರು ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದ ಮನವಿ ಸಲ್ಲಿಸಿದ್ದರು. ಆದರೆ ಈವರೆಗೆ ಯಾವುದೇ ಕೆಲಸ ಪ್ರಾರಂಭವಾಗದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ.
"ಶಾಸಕರು ತಕ್ಷಣ ಕ್ರಮ ಕೈಗೊಂಡು ರಸ್ತೆ ನಿರ್ಮಾಣ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಕ್ಷಿಂತಿ, ಮದರಕಲ್, ಹಯ್ಯಾಳ ಬಿ ಗ್ರಾಮದ ಜನರು ಸೇರಿ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು,” ಎಂದು ಸಾಮಾಜಿಕ ಕಾರ್ಯಕರ್ತ ನಿಂಗಣ್ಣ ಕರಡಿ ಎಚ್ಚರಿಸಿದ್ದಾರೆ.







