ಮೀಸಲಾತಿಗಾಗಿ ಡಿ.10ರಂದು ಬೆಳಗಾವಿಯಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ : ಬಸವ ಜಯ ಮೃತ್ಯುಂಜಯ ಸ್ವಾಮೀಜ

ಹುಣಸಗಿ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪಪಂಗಡಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಡಿ.10ರಂದು ಬೆಳಗಾವಿಯಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಹೋರಾಟವನ್ನು ಯಶಸ್ವಿಗೊಳಿಸಲು ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದವರು ಹಾಗೂ ಮೀಸಲಾತಿ ಬೇಡಿಕೆಗೆ ಬೆಂಬಲಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದ (ಯುಕೆಪಿ) ಆವರಣದಲ್ಲಿ ಪಂಚಮಸಾಲಿ ಸಮಾಜದ ಸಂಘಟನೆಗಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪಪಂಗಡಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿ ದೊರೆಯುವವರೆಗೆ ಹೋರಾಟದ ಧ್ವನಿ ನಿಲ್ಲುವುದಿಲ್ಲ. ಸಮುದಾಯದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕಾನೂನುಬದ್ಧವಾಗಿ ಹಾಗೂ ಸಾಮಾಜಿಕ ನ್ಯಾಯದ ತತ್ವಗಳ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಹೋರಾಟವನ್ನು ಮತ್ತಷ್ಟು ಬಲಪಡಿಸಲು ಗ್ರಾಮ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಾಜದ ಮುಖಂಡರು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ದಾಸೋಹ ಸಮಿತಿ ಕಾರ್ಯದರ್ಶಿ ಬಸವರಾಜ ಮಲಗಲದಿನ್ನಿ ಮಾತನಾಡಿ, ಪಂಚಮಸಾಲಿ ಸಮಾಜವು ತನ್ನದೇ ಆದ ಇತಿಹಾಸ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಕಾಯಕ ಹಾಗೂ ದಾಸೋಹ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಸಮಾಜದ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.
ಸಮಾಜವನ್ನು ಸದೃಢಗೊಳಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಯುವಶಕ್ತಿ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಪ್ರತಿಯೊಂದು ಗ್ರಾಮದಲ್ಲಿಯೂ ಇತರ ಸಮಾಜಗಳೊಂದಿಗೆ ಸೌಹಾರ್ದತೆ ಬೆಳೆಸಿಕೊಂಡು, ಸಮುದಾಯದ ಹಕ್ಕುಗಳಿಗಾಗಿ ಸಂಘಟನೆಯನ್ನು ಬಲಪಡಿಸಬೇಕು. ಬೆಳಗಾವಿಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಉಪವಾಸ ಸತ್ಯಾಗ್ರಹದಲ್ಲಿ ಮುಖಂಡರು, ಯುವಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಪಾಲ್ಗೊಂಡು ಮೀಸಲಾತಿ ಹೋರಾಟಕ್ಕೆ ಬಲ ತುಂಬಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಮರಣ್ಣ ದೇಸಾಯಿ ಹಾಗೂ ದಾಸೋಹ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಸವರಾಜ ಮಲಗಲದಿನ್ನಿ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.
ಶಿಕ್ಷಕ ಭೀಮನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು.
ಸಮಾಜದ ಮುಖಂಡರಾದ ಬಸಣ್ಣ ದೇಸಾಯಿ, ಹೊನ್ನಪ್ಪ ದೇಸಾಯಿ, ಮಲ್ಲಿಕಾರ್ಜುನ ದೇಸಾಯಿ, ಮೋಹನ ಪಾಟೀಲ್, ಚಂದ್ರಶೇಖರ ಹೊಕ್ರಾಣಿ, ಪಂಚಸೇನಾ ಕೊಡೇಕಲ್ ವಲಯದ ಅಧ್ಯಕ್ಷ ಸಂಗನಗೌಡ ಬಿರಾದಾರ, ಬಾಳಸಾಹೇಬ ದೇಶಮುಖ, ಕೊಟ್ರೇಶ ಹಾಗೂ ಶಿವರಾಜ ಹೊಕ್ರಾಣಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಹೊನ್ನಕೇಶವ ದೇಸಾಯಿ ಸ್ವಾಗತಿಸಿದರು. ಮಹಾಂತೇಶ ಮುರಾಳ ನಿರೂಪಿಸಿದರು. ಶಶಾಂಕ ದೇಸಾಯಿ ವಂದಿಸಿದರು.






