ಯಾದಗಿರಿಯಲ್ಲಿ ಟಿಪ್ಪರ್ ಮಾಲಕರ ಸಂಘದಿಂದ ಬೃಹತ್ ಪ್ರತಿಭಟನೆ

ಯಾದಗಿರಿ: ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಶಾಸಕ ಶರಣಗೌಡ ಕಂದಕೂರ ನೀಡಿರುವ ಹೇಳಿಕೆಯನ್ನು ಖಂಡಿಸಿ ಸೋಮವಾರ ನಗರದಲ್ಲಿ ಟಿಪ್ಪರ್ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಧ್ವನಿಗೂಡಿಸಿದ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ್, ಶಾಸಕರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ನಗರದ ಗಂಜ್ ಪ್ರದೇಶದಿಂದ 200ಕ್ಕೂ ಅಧಿಕ ಟಿಪ್ಪರ್‌ಗಳೊಂದಿಗೆ ಮೆರವಣಿಗೆ ಆರಂಭಿಸಿದ ಸಂಘದ ಪದಾಧಿಕಾರಿಗಳು, ಸುಭಾಷ್ ವೃತ್ತದಲ್ಲಿ ಜಮಾಯಿಸಿ ಶಾಸಕ ಶರಣಗೌಡ ಕಂದಕೂರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ್, ಟಿಪ್ಪರ್ ಮಾಲೀಕರು ಶೋಕಿಗಾಗಿ ವಾಹನಗಳನ್ನು ಖರೀದಿಸಿಲ್ಲ. ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದಾರೆ ಎಂದು ಶಾಸಕರ ಹೇಳಿಕೆಗೆ ತಿರುಗೇಟು ನೀಡಿದರು. ಶಾಸಕರು ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ಅಧಿಕಾರಿಗಳು ಕಾನೂನಿನ ಪ್ರಕಾರ ಪರಿಶೀಲನೆ ನಡೆಸಲಿ. ಆದರೆ, ಕಾನೂನುಬದ್ಧವಾಗಿ ಜೀವನ ನಡೆಸುತ್ತಿರುವವರನ್ನು ಬೆದರಿಸುವುದು ಸರಿಯಲ್ಲ. ಟಿಪ್ಪರ್‌ಗಳ ಚಟುವಟಿಕೆಗಳ ಮೇಲೆ ಅಧಿಕಾರಿಗಳು ನಿಗಾ ಇಡುವಂತೆ, ಕಾನೂನು ಉಲ್ಲಂಘನೆಗಳಿದ್ದರೆ ಅವುಗಳ ಮೇಲೆಯೂ ನಿಗಾ ಇರಲಿ ಎಂದು ಹೇಳಿದರು.
ಟಿಪ್ಪರ್ ಮಾಲೀಕರು ತಮ್ಮ ಕುಟುಂಬಗಳನ್ನು ನಿರ್ವಹಿಸಲು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಹಾಗೂ ಗೌರವಯುತ ಜೀವನ ನಡೆಸಲು ವಾಹನಗಳನ್ನು ಖರೀದಿಸಿದ್ದಾರೆ. ಶಾಸಕರಂತೆ ಐಷಾರಾಮಿ ಜೀವನ ನಡೆಸಲು ಯಾರೂ ಟಿಪ್ಪರ್‌ಗಳನ್ನು ಖರೀದಿಸಿಲ್ಲ. ಮಳೆ, ಬಿಸಿಲು, ಚಳಿ ಎನ್ನದೆ ವಾಹನಗಳನ್ನು ಓಡಿಸಿ ದುಡಿಯುತ್ತಿದ್ದಾರೆ ಎಂದರು.
ಟಿಪ್ಪರ್‌ಗಳಿಂದಲೇ ರಸ್ತೆಗಳು ಹಾಳಾಗುತ್ತಿವೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ರಸ್ತೆ ಕಾಮಗಾರಿಗಳ ಗುಣಮಟ್ಟ, ಗುತ್ತಿಗೆದಾರರ ಜವಾಬ್ದಾರಿ ಹಾಗೂ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಯಬೇಕು ಎಂದು ಒತ್ತಾಯಿಸಿದರು. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಎಲ್ಲ ಸಮಸ್ಯೆಗಳಿಗೂ ಟಿಪ್ಪರ್‌ಗಳನ್ನೇ ಹೊಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ವಾಹನಗಳಿಗೆ ಬೆಂಕಿ ಹಚ್ಚುವ ಮಾತುಗಳನ್ನು ಬಿಟ್ಟು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಯಾವುದೇ ತಪ್ಪು ಕಂಡುಬಂದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲಿ ಎಂದು ಸವಾಲಿನ ಧಾಟಿಯಲ್ಲಿ ಮಾತನಾಡಿದರು.
ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಮತದಾರರ ಬಳಿಗೆ ಬರಬೇಕಾಗುತ್ತದೆ. ಆದ್ದರಿಂದ ಜನರ ಸಮಸ್ಯೆಗಳನ್ನು ಆಲಿಸಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕವಾಗಿ ಮಾತನಾಡುವಾಗ ಜನಪ್ರತಿನಿಧಿಗಳು ತಮ್ಮ ಮಾತುಗಳ ಪರಿಣಾಮವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಅಹಿಂದ ರಾಜ್ಯ ಮುಖಂಡ ಹನುಮೇಗೌಡ ಬೀರನಕಲ್, ಉಮೇಶ ಮುದ್ದಾಳ, ತೇಜರಾಜ್ ರಾಠೋಡ್ ಮತ್ತಿತರರು ಮಾತನಾಡಿ, ಶಾಸಕರ ಹೇಳಿಕೆಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಟಿಪ್ಪರ್ ಮಾಲೀಕರು ಹಾಗೂ ಚಾಲಕರಿಗೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ವಿನಾಕಾರಣ ತೊಂದರೆ ನೀಡಬಾರದು. ಶಾಸಕರು ಕಾನೂನು ಮೀರಿ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸುಮಾರು ಒಂದು ಕಿಲೋಮೀಟರ್‌ವರೆಗೆ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯುದ್ದಕ್ಕೂ ಟಿಪ್ಪರ್ ಚಾಲಕರು ನಿರಂತರವಾಗಿ ಹಾರ್ನ್ ಮಾಡಿದ್ದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ಬಸ್‌ಗಳು ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ, ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಘುಪತಿ, ಶಶಾಂಕ, ಪ್ರವೀಣಕುಮಾರ, ಮಲ್ಲು ಮಾಳಿಕೇರಿ, ಮಲ್ಲಯ್ಯ, ರವಿಕುಮಾರ, ಭೀಮರಾಯ ಬಂಕಲಗಿ, ಮಲ್ಲಣ್ಣ, ಎಂ.ಡಿ. ಶೋಫ್, ಪರಶುರಾಮ ನಾಯಕ, ಕಾಶಿನಾಥ ಸೇರಿದಂತೆ ಸಂಘದ ಇತರ ಸದಸ್ಯರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.






