ವಡಗೇರಾ ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ವಡಗೇರಾ: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದೆ ಕೇವಲ ಶಹಾಪುರ ತಾಲೂಕನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಮ್ಮ ಕರ್ನಾಟಕ ಸೇನೆ (ನ.ಮ.ಕ.ಸೇ.) ವತಿಯಿಂದ ಮಂಗಳವಾರ ವಡಗೇರಾ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ರಸ್ತೆ ತಡೆ ನಡೆಸಲಾಯಿತು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬೆಳಿಗ್ಗೆ 11 ಗಂಟೆಗೆ ನ.ಮ.ಕ.ಸೇ. ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮಿ ಹಾಗೂ ತಾಲೂಕು ಅಧ್ಯಕ್ಷ ಸತೀಶ ಜಡಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ವೃತ್ತದಲ್ಲಿ ರಸ್ತೆ ಮಧ್ಯೆ ನಿಂತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೆಲಕಾಲ ವಾಹನ ಸಂಚಾರಕ್ಕೂ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.
ಬಳಿಕ ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಹಲಿಗೆ ಹಾಗೂ ಭಜಂತ್ರಿಯೊಂದಿಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು, ವಡಗೇರಾವನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಸರ್ಕಾರದ ತಾರತಮ್ಯ ನೀತಿ ಖಂಡನೀಯ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ವಡಗೇರಾ ತಾಲೂಕಿನಾದ್ಯಂತ ತೀವ್ರ ಮಳೆ ಕೊರತೆಯಿಂದ ರೈತರು ಬೆಳೆದಿರುವ ತೊಗರಿ, ಹತ್ತಿ, ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆಗಳು ಒಣಗಿ ಹಾನಿಗೊಳಗಾಗಿವೆ. ಇಂತಹ ಪರಿಸ್ಥಿತಿ ಇದ್ದರೂ ಸರ್ಕಾರ ವಾಸ್ತವ ಸ್ಥಿತಿಯನ್ನು ನಿರ್ಲಕ್ಷಿಸಿ ಕೇವಲ ಶಹಾಪುರ ತಾಲೂಕನ್ನು ಮಾತ್ರ ಬರಪೀಡಿತರ ಪಟ್ಟಿಗೆ ಸೇರಿಸಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮಳೆಯ ಪ್ರಮಾಣ, ಬೆಳೆ ಹಾನಿ ಹಾಗೂ ರೈತರ ಸಂಕಷ್ಟವನ್ನು ಮರುಪರಿಶೀಲಿಸಿ ತಕ್ಷಣವೇ ವಡಗೇರಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಬೆಳೆ ಪರಿಹಾರ, ಇನ್‌ಪುಟ್ ಸಬ್ಸಿಡಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಗಳಾ ಅವರಿಗೆ ನ.ಮ.ಕ.ಸೇ. ಮುಖಂಡರು ಮನವಿ ಪತ್ರ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ತಹಸೀಲ್ದಾರ್ ಅವರು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.
ಪ್ರತಿಭಟನಾ ಸಂದರ್ಭದಲ್ಲಿ ವಡಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಮಹಿಬೂಬ್ ಅಲಿ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಿದರು.
ಪ್ರತಿಭಟನೆಯಲ್ಲಿ ರಾಜಸಿಂಗ್ ಮದರಕಲ್,ಶ್ರೀನಿವಾಸ ಮಡಿವಾಳ, ಶಿವರಾಜ್ ನಾಡಗೌಡ, ಮಲ್ಲು ಜಡಿ, ಬಸ್ಸು ಬುಸೇನಿ, ರಾಜು ಗುಂಡುಗುರ್ತಿ, ತಿಮ್ಮಣ್ಣ ಕಡೆಚೂರು, ಸಾಬಣ್ಣ ಕಲ್ಲಪನೂರು, ಬಸವರಾಜ್ ಕೊದಡ್ಡಿ, ನಿಂಗಪ್ಪ ಕುರ್ಕಳಿ, ಸಾಬರೆಡ್ಡಿ, ರಾಜು, ಬಿಮ್ಮು, ಸಿದ್ದು ಹುಂಡೆಕಲ್, ಸಿದ್ದು ಕಡೆಚೂರು, ಸತೀಶ್ ನಾಟೇಕರ್, ನಿಂಗಪ್ಪ ಪರಾರಿ, ಮರ್ಲಿಂಗ, ಚನ್ನಪ್ಪ,ಮಹೇಶ್, ಮಲ್ಲು, ಶಿವು, ತಾಯಪ್ಪ, ದೇವು ವಿಶ್ವಕರ್ಮ, ರೆಡ್ಡಿ, ಸಾಬರೆಡ್ಡಿ ಪರಾರಿ, ಹಣಮಂತ ದಂಡಂಬಳಿ,ರಂಗಪ್ಪ ಗುಂಡುಗುರ್ತಿ ಸೇರಿದಂತೆ ನೂರಾರು ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.






