ಹಲವು ಸಚಿವರ ಖಾತೆ ಬದಲಾವಣೆಯಾಗಬಹುದು ಎಂದ ಸಚಿವ ಶರಣಬಸಪ್ಪ ದರ್ಶನಾಪುರ

ಯಾದಗಿರಿ: ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿದ್ದು, ಹಲವು ಸಚಿವರ ಖಾತೆ ಬದಲಾವಣೆಯಾಗಬಹುದು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಯಾಕೆ ಕರೆದಿದ್ದಾರೆ ಎಂದು ನಮಗೆ ತಿಳಿದಿಲ್ಲ. ಆದರೆ ಹಲವು ಸಚಿವರ ಖಾತೆ ಬದಲಾವಣೆಯಾಗಬಹುದು. ಜನರ ತೀರ್ಮಾನದಂತೆ ಸಚಿವ ಸಂಪುಟ ವಿಸ್ತರಣೆ ಆಗಲ್ಲ ಎಲ್ಲವನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಸಚಿವ ಸ್ಥಾನ ಯಾರಿಗೆ ನೀಡಬೇಕು ಎನ್ನುವ ಕುರಿತು ಸಿಎಂ ಸಿದ್ದರಾಮಯ್ಯ ತೀರ್ಮಾನಿಸುತ್ತಾರೆ. ಸಚಿವ ಸಂಪುಟ ಪುನರ್ ರಚನೆಯಾದರೆ ಸಚಿವರ ಬದಲಾವಣೆ ಆಗುತ್ತದೆ ಎಂದು ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಚೇಂಜ್ ಮಾಡಿ, ಕಲ್ಯಾಣ ಕರ್ನಾಟಕ ಭಾಗದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬಿಜೆಪಿ ನೀಡಲಿ. ನಮ್ಮ ಭಾಗದವರಿಗೆ ಬಿಜೆಪಿಯು ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ, ಈ ಭಾಗದವರಿಗೆ ಕೊಟ್ಟರೇ ಈ ಭಾಗ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.