ಗುರುಮಠಕಲ್ ಮತಕ್ಷೇತ್ರದ ಪಿಹೆಚ್‌ಸಿ, ಸಿಹೆಚ್‌ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ದಾಖಲಾದ ಗರ್ಭೀಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಶೇಕಡವಾರು 8,9 ಹೀಗೆ 10ರೊಳಗೆ ಇರುವುದನ್ನು ಕಂಡು ಶಾಸಕ ಶರಣಗೌಡ ಕಂದಕೂರ ಕಳವಳ ವ್ಯಕ್ತಪಡಿಸಿದರು.
ಗುರುಮಠಕಲ್ ಮತಕ್ಷೇತ್ರದ ಪಿಹೆಚ್‌ಸಿ, ಸಿಹೆಚ್‌ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿದರು.
ಔಷಧಿನೇ ಇಲ್ಲದಿದ್ದರೆ ಆಸ್ಪತ್ರೆ ಹೇಗೆ ನಡುಸುತ್ತೀರಿ :
ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಕೆಲವು ಕಡೆ ತಜ್ಞ ವೈದ್ಯರಿಲ್ಲ, ವೈದ್ಯರಿದ್ದರೂ ಒಬ್ಬೊರಿಗೆ ಹಲವು ಆಸ್ಪತ್ರೆಗಳು ಪ್ರಭಾರ ಇರುವುದರಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಯಾವುದೇ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವಿಲ್ಲವೆಂದು ಜನರು ದೂರಿದರೆ, ನಾಯಿ ಕಡಿತಕ್ಕೆ ಕಳೆದ 6 ತಿಂಗಳಿಂದ ಲಸಿಕೆ ಲಭ್ಯವಿಲ್ಲ, 4 ತಿಂಗಳಿಂದ ಐವಿ ಪ್ಲೂಡ್ಸ್ ಸರಬರಾಜಿಲ್ಲ, ಕೆಲವೊಂದು ಔಷಧಿಗಳು ಆಸ್ಪತ್ರೆಯ ನಿರ್ವಹಣಾ ವೆಚ್ಚದಲ್ಲಿ ಖರೀದಿ ಮಾಡುತ್ತೇವೆ ಹೀಗೆ ಸಾಲು ಸಾಲು ಸಮಸ್ಯೆಗಳು ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ಕಂಡು ಬಂದವು. ಕಂಡು ಬಂದ ಹಲವು ದೃಶ್ಯಗಳನ್ನು ಕಂಡು ದಂಗಾದ ಶಾಸಕ ಇದೇ ರೀತಿ ಆಸ್ಪತ್ರೆಗಳಲ್ಲಿ ಔಷಧಿನೇ ಇಲ್ಲದಿದ್ದರೆ ಆಸ್ಪತ್ರೆ ಹೇಗೆ ನಡುಸುತ್ತೀರಿ ಎಂದು ಡಿಹೆಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಸೇರಿದಂತೆ ಹಲವು ಮೇಲಾಧಿಕಾರಿಗಳಿಗೆ ಸ್ಥಳದಿಂದಲೇ ಪೋನ್ ಸಂಪರ್ಕ ಮಾಡಿ ವಿಷಯದ ತೀವ್ರತೆ ಮತ್ತು ಸಮಸ್ಯೆಗಳ ಪರಿಹರಿಸುವಂತೆ ಕೋರಿದರು.
ಕೋಟಗೇರಾ ಆಸ್ಪತ್ರೆಗೆ ಭೇಟಿ :
ಮತಕ್ಷೇತ್ರದ ಕೋಟಗೇರಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟಾಫ್ ನರ್ಸ್ಗಳ ವರ್ತನೆ, ಫಾರ್ಮಾಸಿಸ್ಟ್ ನಿರ್ಲಕ್ಷ್ಯ ಕಂಡು ಕೆರಳಿದ ಶಾಸಕರು ಕೂಡಲೇ ಇಬ್ಬರಿಗೆ ನೊಟಿಸ್ ನೀಡುವಂತೆ ಸೂಚಿಸಿದರು.
ಗಾಜರಕೋಟ್ ಆಸ್ಪತ್ರೆಗೆ ಭೇಟಿ :
ಮತಕ್ಷೇತ್ರದ ಗಾಜರಕೋಟ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಯಿ ಕಡಿತ ಲಸಿಕೆ, ಐವಿ ಪ್ಲೂಡ್ಸ್ ಕೊರತೆ ಗಮನಕ್ಕೆ ಬಂದಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಡಿಹೆಚ್‌ಒಗೆ ಸೂಚನೆ ನೀಡಿದರು.
ಗುರುಮಠಕಲ್ ಆಸ್ಪತ್ರೆಗೆ ಭೇಟಿ :
ಗುರುಮಠಕಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ರಿಜಿಸ್ಟರ್‌ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ಜನರು ಆಸ್ಪತ್ರೆ ಅವ್ಯವಸ್ಥೆ ಕುರಿತು ಹಲವು ದೂರುಗಳು ಬರುತ್ತಿದ್ದು, ಎಚ್ಚರದಿಂದ ಇರಿ, ಆಸ್ಪತ್ರೆಗೆ ಬಡವರು ಬರುತ್ತಾರೆ. ಅವರನ್ನು ಮಾನವೀಯತೆ ಇಂದ ಕಾಣಿ, ನರ್ಸ್ಗಳು ಜನರೊಡನೆ ಸೌಜನ್ಯದಿಂದ ವರ್ತಿಸದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ನಂತರ ಸೈದಾಪುರ ಆಸ್ಪತ್ರೆ, ಮಲ್ಹಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
9 ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ
ಗುರುಮಠಕಲ್ ಮತಕ್ಷೇತ್ರದ ಬಂದಳ್ಳಿ, ಬೆಳಗುಂದಿ, ಅಚ್ಚೋಲಾ, ಸೈದಾಪುರ, ಮಾಧ್ವಾರ, ಅಜಲಾಪೂರ, ವಂಕಸಂಬ್ರ, ಮೊಗದಂಪೂರ, ಕಂದಕೂರ ಹೀಗೆ 9 ಗ್ರಾಮಗಳಲ್ಲಿ ತಲಾ 65 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಎಲ್ಲಾ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.
-ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್
ಎಲ್ಲಾ ಆಸ್ಪತ್ರೆಗಳಿಗೆ ಆರ್‌ಒ ಪ್ಲಾಂಟ್
ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಸಿಸಿ ರಸ್ತೆ, ಕಾಂಪೌಂಡ್, ಮೂಲಸೌಕರ್ಯ ಜೊತೆಗೆ ಆರ್‌ಒ ಪ್ಲಾಂಟ್‌ಗಳನ್ನು ನಿರ್ಮಿಸಿಕೊಡಲಾಗುವುದು, ಅವಶ್ಯಕತೆ ಇರುವ ಆಸ್ಪತ್ರೆಗಳ ಪಟ್ಟಿ ಮಾಡಿ ಕೊಡಬೇಕು, ಎಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಸಾಕಷ್ಟು ಅನುದಾನ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.







