ಯಾದಗಿರಿ | 12 ಗ್ರಾಮಗಳಲ್ಲಿ ಮೊಬೈಲ್ ಆರೋಗ್ಯ ಸೇವೆ : MSD ಫಾರ್ಮಾ–ಸ್ಮೈಲ್ ಫೌಂಡೇಶನ್ ಸಹಯೋಗದ ಪ್ರಯತ್ನ

ಯಾದಗಿರಿ: ಜಿಲ್ಲೆಯ ವಡಗೇರಾ ಮತ್ತು ಶಹಾಪೂರ ತಾಲೂಕಿನ ಆಯ್ದ 12 ಗ್ರಾಮಗಳಲ್ಲಿ ಜನಸಾಮಾನ್ಯರ ಆರೋಗ್ಯ ವೃದ್ಧಿಗಾಗಿ MSD ಫಾರ್ಮಾ ಸಂಸ್ಥೆಯ ಸಹಯೋಗದೊಂದಿಗೆ ಸ್ಮೈಲ್ ಫೌಂಡೇಶನ್ ‘ಮನೆ ಬಾಗಿಲಿಗೆ ಆರೋಗ್ಯ’ ಎಂಬ ಯೋಜನೆಯಡಿ ಮೊಬೈಲ್ ಹೆಲ್ತ್ ಯೂನಿಟ್ ಸೇವೆಯನ್ನು ಪ್ರಾರಂಭಿಸಿದೆ.
ಗಡ್ಡೆಸೂಗೂರು, ಗುಲಸರಂ, ಹಾಲಗೇರಾ, ನಾಯ್ಕಲ್ ತೇಕುರಾಲ, ಮನಗನಾಲ, ಹೊರಟೂರು, ಗುಂಡಳ್ಳಿ, ಉಳ್ಳೇಸೂಗೂರು, ದೋರನಳ್ಳಿ, ಕುರಕುಂದಾ ಮತ್ತು ಖಾನಾಪೂರ ಗ್ರಾಮಗಳಿಗೆ ವೈದ್ಯರು ಹಾಗೂ ಸಿಬ್ಬಂದಿ ಪ್ರತಿ 15 ದಿನಗಳಿಗೊಮ್ಮೆ ಭೇಟಿ ನೀಡಿ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಔಷಧೋಪಚಾರ ಒದಗಿಸುತ್ತಿದ್ದಾರೆ.
ಪ್ರತಿ ದಿನ ಸರಾಸರಿ 40 ರಿಂದ 50 ಮಂದಿ ರೋಗಿಗಳು ಈ ಸೇವೆಯ ಸದುಪಯೋಗ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅವರನ್ನು ಮೇಲ್ದರ್ಜೆಯ ಆಸ್ಪತ್ರೆಗಳಿಗೆ ರವಾನಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಬಿರಾದಾರ ತಿಳಿಸಿದ್ದಾರೆ.
ಈ ಕಾರ್ಯಕ್ಕೆ MSD ಫಾರ್ಮಾ ಸಂಸ್ಥೆ ಹಾಗೂ ಸ್ಮೈಲ್ ಫೌಂಡೇಶನ್ ನೀಡುತ್ತಿರುವ ಸಹಕಾರಕ್ಕೆ ಆರೋಗ್ಯ ಇಲಾಖೆ ಕೃತಜ್ಞತೆ ವ್ಯಕ್ತಪಡಿಸಿದೆ.
ಕಾರ್ಯಕ್ರಮದಲ್ಲಿ ಅಬ್ದುಲ್ ಶಫೀ, ಡಾ. ಯಲ್ಲಪ್ಪ, ಆಶ್ವಿನಿ, ನಾಗಮ್ಮ ಮತ್ತು ವಿನೋದ್ ಕುಮಾರ್ ಉಪಸ್ಥಿತರಿದ್ದರು.







