ಯಾದಗಿರಿ: ಗ್ರಾ.ಪಂ. ಪಿಡಿಒ, ಸದಸ್ಯೆ ನಡುವೆ ಬೀದಿ ಜಗಳ; ದೂರು, ಪ್ರತಿದೂರು ದಾಖಲು

ಪಿಡಿಒ ದೇವರಾಜ್
ಯಾದಗಿರಿ: ಜಿಲ್ಲೆಯ ದೋರನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ಹಾಗೂ ಓರ್ವ ಸದಸ್ಯೆ ನಡುವೆ ಬೀದಿ ಜಗಳ ನಡೆದು ದೂರು, ಪ್ರತಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಅವರು ಶನಿವಾರ ಬೆಳಿಗ್ಗೆ ದೋರನಹಳ್ಳಿ ಗ್ರಾಮದಲ್ಲಿ ವಾಹನದಲ್ಲಿ ಹೋಗುತ್ತಿರುವಾಗ ಎದುರಿಗೆ ಬಂದ ಸದಸ್ಯೆ ತಾಯಮ್ಮ ತೆಗನೂರ ಮತ್ತು ಅವರ ತಮ್ಮ ಮಂಜುನಾಥ ಅವರು, ಸಭೆ ಬಗ್ಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪಿಡಿಒ ದೇವರಾಜ್ ಅವರು, ಗ್ರಾಪಂ ಸದಸ್ಯೆ ತಾಯಮ್ಮ ಶ್ರೀಕಾಂತ ತೆಗನೂರ ಮತ್ತು ಮಂಜುನಾಥ ಬಸಪ್ಪ ಎಂಬವರ ವಿರುದ್ಧ ಶಹಾಪುರ ಪೋಲಿಸ್ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದಾರೆ.
ಪ್ರತಿದೂರು ದಾಖಲು:
ಸಭೆಯ ಬಗ್ಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಕೇಳಿದ್ದಕ್ಕೆ ಬಾಯಿಗೆ ಬಂದಂತೆ ಬೈದು ಹಲ್ಲೆ ಮಾಡಿದ್ದಾರೆ ಎಂದು ಪಿಡಿಒ ದೇವರಾಜ್, ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ದೊರೆ, ಉಪಾಧ್ಯಕ್ಷ ಈರಣ್ಣ ಕಸನ್, ಆರಿಫ್, ಮಹಾಂತಗೌಡ ನಂದಿಕೊಲ್, ವಿಜಯಕುಮಾರ, ಸಿದ್ದಣ್ಣ ದೇಸಾಯಿ ಹಾಗೂ ಮಂಜುನಾಥ ದೊರೆ ವಿರುದ್ಧ ಗ್ರಾಪಂ ಸದಸ್ಯೆ ತಾಯಮ್ಮ ಭಾನುವಾರ ಪ್ರತಿದೂರು ದಾಖಲಿಸಿದ್ದಾರೆ.





