ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಭೀಮಣ್ಣ ಮೇಟಿ ಮತಯಾಚನೆ

ಯಾದಗಿರಿ: ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ಪರವಾಗಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಅವರು ಗುರುವಾರ ಮತಯಾಚಿಸಿದರು.
ಶಹಾಪುರದ ಡಿಡಿಯು ಶಾಲೆ, ಶಾರದಾ ವಿದ್ಯಾನಿಕೇತನ, ಏಕಲವ್ಯ ಪ್ರೌಢ ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಬಾಲಕ ಮತ್ತು ಬಾಲಕಿಯರ ಪ್ರೌಢ ಶಾಲೆ, ಮೊರಾರ್ಜಿ ವಸತಿ ಶಾಲೆ, ವಿಶ್ವಜ್ಯೋತಿ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಸಂಗಮೇಶ್ವರ ಶಾಲೆ, ಖಾನಾಪುರದ ಸರಕಾರಿ ಪ್ರೌಢ ಶಾಲೆ, ದೋರನಹಳ್ಳಿಯ ಸರಕಾರಿ ಪ್ರೌಢ ಶಾಲೆ, ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮದ ಸರಕಾರಿ ಪ್ರೌಢ ಶಾಲೆ, ರಸ್ತಾಪುರದ ಸರಕಾರಿ ಪ್ರೌಢ ಶಾಲೆ, ಹತ್ತಿಗೂಡುರು ಸರಕಾರಿ ಪ್ರೌಢ ಶಾಲೆ, ಯಾದಗಿರಿಯ ಡಯಟ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಸರಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು, ಶಿಕ್ಷಕರ ಏಳಿಗಾಗಿ ರಾಜ್ಯ ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಇದನ್ನು ಮನಗಂಡು ಮತದಾರರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು ಬೆಂಬಲಿಸುವಂತಹ ಕೆಲಸ ಮಾಡುವುದು ಅಗತ್ಯವಿದೆ ಎಂದು ತಿಳಿಸಿದರು.
ಕಳೆದ ಆರು ವರ್ಷಗಳಿಂದಲೂ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಶಶಿಲ್ ನಮೋಶಿ ಅವರ ಸಾಧನೆ ಶೂನ್ಯವಾಗಿದೆ. ಹೇಳಿಕೊಳ್ಳುವಂತಹ ಕೆಲಸ ಅವರು ಶಿಕ್ಷಣ ಕ್ಷೇತ್ರದಲ್ಲಿ ಒಂದೂ ಕೆಲಸ ಮಾಡಿಲ್ಲ. ಹೀಗಾಗಿಯೇ ಮತದಾರರು ಅವರಿಗೆ ತಕ್ಕ ಪಾಠ ಕಲಿಸುವಂತಹ ಕೆಲಸ ಮಾಡುವುದು ಅಗತ್ಯವಿದೆ ಎಂಬುದು ಮರೆಯಬಾರದು ಎಂದು ಹೇಳಿದರು.
ಬಿಜೆಪಿ ಯಾವಾಗಲೂ ಶಿಕ್ಷಕರ ವಿರೋಧಿ ನೀತಿ ಅನುಸರಿಸುತ್ತಿದೆ. ಹೀಗಾಗಿಯೇ ಮತದಾರರು ತಕ್ಕಪಾಠ ಈ ಭಾರಿ ಕಲಿಸುವುದರಲ್ಲಿ ಯಾವುದೇ ರೀತಿಯಿಂದ ಅನುಮಾನವೇ ಇಲ್ಲ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶ್ರೀಶೈಲ್ ಹೊಸಮನಿ, ಖಾಸಗಿ ಶಾಲಾ ಒಕ್ಕೂಟದ ಶಹಾಪುರ ತಾಲೂಕು ಅಧ್ಯಕ್ಷ ಆರ್. ಚೆನ್ನಬಸ್ಸು ವನದುರ್ಗ ಇದ್ದರು.






