ಯಾದಗಿರಿಯಲ್ಲಿ ‘ಆಪರೇಷನ್ ಅಭ್ಯಾಸ್’ ಅಣಕು ಪ್ರದರ್ಶನ

ಯಾದಗಿರಿ : ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾದ ‘ಆಪರೇಷನ್ ಅಭ್ಯಾಸ್’ ಹೆಸರಿನ ಅಣಕು ಪ್ರದರ್ಶನವನ್ನು ನಗರದಲ್ಲಿಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ನಗರ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಹೇಳಿದರು.
ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಕಲಬುರಗಿ ಎಸ್ ಡಿ ಆರ್ ಎಫ್ ತಂಡ, ಜೆಸ್ಕಾಂ, ಲೋಕೋಪಯೋಗಿ, ಕ್ರೀಡಾ ಇಲಾಖೆ, ಎನ್.ಎಸ್.ಎಸ್ ಹಾಗೂ ಎನ್ ಸಿ ಸಿ ಮತ್ತು ಆಶಾ ಕಾರ್ಯಕರ್ತೆಯರ ತಂಡಗಳ ಅಣಕು ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಪಹಲ್ಗಾಮ್ ನಲ್ಲಿ ಅಮಾಯಕರ ಮೇಲಾದ ದಾಳಿ ಹ್ಯೇಯ ಕೃತ್ಯವಾಗಿದೆ. ಇಂತಹ ದಾಳಿಗಳು ಹಾಗೂ ಯುದ್ಧದಂತಹ ಸಂದರ್ಭದಲ್ಲಿ ನಡೆಯುವ ದಾಳಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಮಾಕ್ ಡ್ರಿಲ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸದಾ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಮಾತನಾಡಿ, ಯುದ್ದದಂತಹ ಸಂದರ್ಭ ಎದುರಿಸಲು, ಉಗ್ರರ ದಾಳಿ ನಿಯಂತ್ರಣ ಹಾಗೂ ದಾಳಿ ನಂತರ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಂದು ಜಾಗೃತಿ ಮೂಡಿಸುವಲ್ಲಿ ಅಣಕು ಪ್ರದರ್ಶನ ಯಶಸ್ವಿಯಾಗಿದೆ. ಇದಕ್ಕಾಗಿ ವಿವಿಧ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಮಾತನಾಡಿದರು.
ಅಣಕು ಪ್ರದರ್ಶನ ನಿರ್ವಹಣೆಯನ್ನು ಡಿ.ವೈ.ಎಸ್ಪಿ ಭಾರತ ಕುಮಾರ್ ವಹಿಸಿಕೊಂಡಿದ್ದರು. ಭಯೋತ್ಪಾನೆ, ಡ್ರೋನ್ ದಾಳಿ, ಪೋಲಿಸ್ ಇಲಾಖೆ, ಅಗ್ನಿ ಶಾಮಕ ಇಲಾಖೆ, ಎಸ್ ಡಿ ಆರ್, ಎಫ್ ತಂಡ, ಬಾಂಬ್ ಸ್ಕ್ವಾಡ್ ತಪಾಸಣಾ ತಂಡಗಳ ಕಾರ್ಯಾಚರಣೆ ಗಮನ ಸೆಳೆದವು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







