ಸೆ.28ರವರೆಗೆ ಯಾದಗಿರಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಸಾಂದರ್ಭಿಕ ಚಿತ್ರ
ಯಾದಗಿರಿ: ಸೆ.21ರಿಂದ 27ರವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 43 ಮಿ.ಮೀ ಮಳೆ ಬೀಳಬೇಕಾಗಿದ್ದರೂ, 96 ಮಿ.ಮೀ ಮಳೆಯಾಗಿದೆ. ವಾಡಿಕೆಯಿಗಿಂತ 223% ಹೆಚ್ಚುವರಿ ಮಳೆಯಾದ ಹಿನ್ನೆಲೆಯಲ್ಲಿ ಸೆ.28ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಿಸಿದೆ.
ಭಾರತ ಹವಾಮಾನ ಇಲಾಖೆ ಮತ್ತು ಕೆಎಸ್ಎನ್ಡಿಎಮ್ಸಿ ಬೆಂಗಳೂರು ಪ್ರಕಟಣೆಯಂತೆ, ಭೀಮಾ ನದಿಯಲ್ಲಿ ಒಳ ಹರಿವು ಹೆಚ್ಚಿರುವುದರಿಂದ ಮುಂದಿನ 48 ಗಂಟೆಗಳಲ್ಲಿ ನದಿತೀರ ಪ್ರದೇಶಗಳಲ್ಲಿ ಪ್ರವಾಹದ ಅಪಾಯವಿದೆ. ಸೆ.27ರಂದು ಭೀಮಾ ನದಿಯ ಗುರಸುಣಗಿ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಒಳ ಹರಿವು ಮತ್ತು ಹೊರ ಹರಿವು ತಲಾ 4,20,000 ಕ್ಯೂಸೆಕ್ಸ್ ಆಗಿತ್ತು.
ಸೆ.26ರ ರಾತ್ರಿ ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಲ್ಲಿ 5 ಮನೆಗಳಿಗೆ ನೀರು ನುಗ್ಗಿ, 5 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ವಡಗೇರಾ ತಾಲ್ಲೂಕಿನ ಶಿವನೂರ ಗ್ರಾಮಕ್ಕೆ ಹೋಗುವ 3 ರಸ್ತೆಗಳಲ್ಲಿ 2 ರಸ್ತೆ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಜೋಳದಡಗಿ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಳೆಯಿಂದ 29 ಮನೆಗಳು ಕುಸಿದಿದ್ದು, ಹುಣಸಗಿ ತಾಲ್ಲೂಕಿನಲ್ಲಿ ಗೋಡೆ ಕುಸಿದು 18 ಸಣ್ಣ ಜಾನುವಾರುಗಳು (ಮೇಕೆ/ಆಡು/ಕುರಿ) ಸತ್ತುಹೋಗಿವೆ.
ಮಳೆಯಿಂದ ಹಾಗೂ ನದಿ ಪ್ರವಾಹದಿಂದ ಸುಮಾರು 1,14,003 ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿರುವುದು ಅಂದಾಜಿಸಲಾಗಿದೆ. ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.







