ಪ್ರಶಿಕ್ಷಣ ವರ್ಗ ಮಹಾಭಿಯಾನದಿಂದ ಪಕ್ಷದ ಸಂಘಟನೆ ಆನೆಬಲ: ಮಾಜಿ ಕೇಂದ್ರ ಸಚಿವ ಖೂಬಾ

ಯಾದಗಿರಿ: ಪ್ರಶಿಕ್ಷಣ ವರ್ಗದ ಮೂಲಕ ದೇಶ, ವಿದೇಶಗಳ ಅನೇಕ ಪ್ರಚಲಿತ ವಿದ್ಯಮಾನಗಳನ್ನು ತಿಳಿಸುವ ಮೂಲಕ ಕಾರ್ಯಕರ್ತರನ್ನು ಸಂಘಟಿಸಿ ಆ ಮೂಲಕ ಪಕ್ಷವನ್ನು ಗಟ್ಟಿಯಾಗಿ ಬೆಳೆಸುವ ಪ್ರಕ್ರಿಯೇ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಇಲ್ಲಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಎರಡು ದಿನಗಳ ಬೈಠಕ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪಕ್ಷಕ್ಕೆ ಅತ್ಯಂತ ನಿಷ್ಠೆ ಮತ್ತು ಸಮಯ ಕೊಟ್ಟು ಕೆಲಸ ಮಾಡುವ 160 ಜನರಿಗೆ ಇಲ್ಲಿ 12 ಅಧ್ಯಾಯಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಆ ಮೂಲಕ ಬಿಜೆಪಿ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಡಲಾಗುವುದೆಂದರು.
ರಾಷ್ಟ್ರಸೇವೆ, ಸುರಕ್ಷತೆ ಮತ್ತು ಸುಭೀಕ್ಷೆ ಮೂಲಕ ಸಮಾಜ ಸೇವೆ ಕನಸನ್ನು ಹೊತ್ತುಕೊಂಡು ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದು ಆ ಮೂಲಕ ಜನರ ಸೇವೆ ಮಾಡುವುದೇ ಬಿಜೆಪಿಯ ಮೂಲಗುರಿಯಾಗಿದೆ ಎಂದು ಖೂಬಾ ಹೇಳಿದರು.
ದೇಶದಲ್ಲಿ 130ಕ್ಕೂ ಅಧಿಕ ರಾಜಕೀಯ ಪಕ್ಷಗಳಿವೆ. ಕಾಂಗ್ರೆಸ್ ಸೇರಿದಂತೆಯೇ ಯಾವ ಪಕ್ಷಗಳು ಸಹ ಇಂತಹ ತರಬೇತಿ ನೀಡುವುದಿಲ್ಲ. ಅವುಗಳಿಗೆ ಅಧಿಕಾರ, ಹಣಲೂಟಿ ಮಾಡುವುದೇ ಮುಖ್ಯ ಉದ್ದೇಶವಾಗಿರುತ್ತದೆ. ಆದರೇ ಬಿಜೆಪಿಗೆ ದೇಶಭಕ್ತಿ ಕಲಿಸುವುದರ ಜತೆಗೆ ದೇಶದ ಅಭಿವೃದ್ಧಿ ಮುಖ್ಯವಾಗಿದೆ ಎಂದರು.
13ಕೋಟಿ ಸದಸ್ಯತ್ವವನ್ನು ಹೊಂದಿರುವ ಜಗತ್ತಿನ ಏಕೈಕ ದೊಡ್ಡ ಪಕ್ಷವೆಂದರೇ ಬಿಜೆಪಿ. 22 ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ, 140 ಜನರಿರುವ ಭಾರತ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಉತ್ತಮ ಕೆಲಸ ಮಾಡು ತ್ತಿದ್ದಾರೆಂದರು.ಇದು ಮುಖ್ಯವಾದ ಪ್ರಶಿಕ್ಷಣ ವರ್ಗವಾಗಿದ್ದು, ಇದರಲ್ಲಿ ಭಾಗವಹಿಸುವವರು ಮೊಬೈಲ್ ನಿಂದ ದೂರವಿದ್ದು, ಚಿತ್ತ ಇಲ್ಲಿಯೇ ಇಟ್ಟು ಎಲ್ಲವನ್ನು ಕೇಳಿಕೊಂಡು ಮುಂದೆ ಆ ರೀತಿಯಾಗಿ ಕೆಲಸ ಮಾಡುವ ಮೂಲಕ ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕೆಂದರು.
ವಿಧಾನ ಪರಿಷ ತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಹಿಂದೂತ್ವ ಎಂದರೇ ನಾಗರಿಕತೆ, ಆದರೇ ಈ ಹೆಸರು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಿಂದೂ ಸಮಾಜವನ್ನು ಸರ್ವ ನಾಶವಾಗುವುದನ್ನೇ ಬಯಸಿದಂತೆಯೇ ವರ್ತಿಸುತ್ತಿದ್ದಾರೆ. ಆದರೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಜತೆಗೆ ಧರ್ಮ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆಂದರು. ಈಗ ದೇಶದಲ್ಲಿ ಹಿಂದೂತ್ವ, ಬಂಧುತ್ವ ಮತ್ತು ಸಿಂಧೂತ್ವದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದರು.
ಮಾಜಿ ಎಂಎಲ್‌ಸಿ, ಕಲ್ಬುರ್ಗಿ ವಿಭಾಗ ಪ್ರಭಾರಿ ಅರುಣ ಶಹಾಪುರ ಮಾತನಾಡಿ, ಎರಡು ದಿನಗಳ ಈ ಶಿಬಿರ ಅಮೂಲ್ಯವಾಗಿದ್ದು, ಇದರಲ್ಲಿ ಭಾಗವಹಿಸಿದವರು ಉತ್ತಮ ಜ್ಞಾನ ಪಡೆದು ಪಕ್ಷದ ಸಂಘಟನೆಗೆ ಕೆಲಸ ಮಾಡಬೇಕೆಂದರು.
ಪ್ರಶಿಕ್ಷಣ ವರ್ಗಕ್ಕೆ ಪಂ. ದೀನದಯಾಳ್ ಉಪಾಧ್ಯಯ ಅವರ ಹೆಸರು ಇಟ್ಟ ಬಗ್ಗೆ ಮತ್ತು ಜನಸಂಘ ಮುಂದೆ ಬಿಜೆಪಿ ಪಕ್ಷವಾಗಿ ಬೆಳೆದ ಬಗ್ಗೆ ವಿವರಿಸಿದರು.
ಮಾಜಿ ಮಂತ್ರಿ ನರಸಿಂಹ ನಾಯಕ್ ಮಾತನಾಡಿ, ಈ ಶಿಬಿರದಲ್ಲಿ ಭಾಗಹಿಸಿದವರೇ ನಿಜವಾದ ಸಂಘಟಿಕರು, ಜಿಲ್ಲೆಯ ಎಲ್ಲಿ ನಾಲ್ಕು ಕ್ಷೇತ್ರಗಳಿವೆ. ಈಗಿನಿಂದಲ್ಲೇ ತಯಾರಿ ಮಾಡಿಕೊಂಡರೇ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಬಿಜೆಪಿಗೆ ಆಗುತ್ತದೆ. ಸಂಘಟನೆ ವಿಕ್ ಆಗದಂತೆಯೇ ಎಲ್ಲರೂ ಕೆಲಸ ಮಾಡೋಣ ಎಂದರು.
ವೇದಿಕೆಯಲ್ಲಿ ಹಿರಿಯ ಎಂಎಲ್‌ಸಿ ಡಾ.ಬಿ.ಜಿ.ಪಾಟೀಲ್, ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ,ಸಹ ಪ್ರಭಾರಿ ಶರಣಪ್ಪ ತಳವಾರ, ಪ್ರಶಿಕ್ಷಣ ರಾಜ್ಯ ಸಂಚಾಲಕ ರಾಜಶೇಖರ ನಾಗಮುರ್ತಿ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ದಾಳ ಮತ್ತು ರಾಜಶೇಖರ್ ಗೂಗಲ್, ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಮತ್ತು ಡಾ.ಶರಣಭೂಪಾಲರಡ್ಡಿ ನಾಯ್ಕಲ್, ರಾಚನಗೌಡ ಮುದ್ದಾಳ, ದೇವಿಂದ್ರನಾಥ ನಾದ,ಚಂದ್ರಶೇಖರ ಮಾಗನೂರ, ನಿರೂಪಿಸಿದರು.






