ಆರೆಸ್ಸೆಸ್ ನಿಷೇಧ ಮಾಡುವ ಹೇಳಿಕೆ ನೀಡಿ ಪ್ರಿಯಾಂಕ್ ಖರ್ಗೆ ಉದ್ದಟತನ ಮೆರೆದಿದ್ದಾರೆ: ಹಣಮಂತ ಇಟಗಿ

ಹಣಮಂತ ಇಟಗಿ
ಯಾದಗಿರಿ: ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ವನ್ನು ನಿಷೇಧ ಮಾಡುತ್ತೇವೆ ಎಂದು ಹೇಳುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಉದ್ದಟತನ ಮೆರೆದಿದ್ದು ಇದೊಂದು ಹಗಲುಗನಸು ಆಗಿದೆ ಎಂದು ಜಿಲ್ಲಾ ಭಾರತೀಯ ಜನತಾ ಪಾರ್ಟಿ ವಕ್ತಾರ ಹಣಮಂತ ಇಟಗಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅಂದಿನ ಕಾಂಗ್ರೆಸ್ ಸರ್ಕಾರದ ಅಧಿಕೃತ ಆಮಂತ್ರಣದ ಮೇರೆಗೆ 1963 ರ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಮಿಲಿಟರಿಯವರು ಮತ್ತು ಪೊಲೀಸ್ ನವರು ಹೊರತುಪಡಿಸಿ ಭಾಗವಹಿಸಿದ ಏಕೈಕ ಸಾಮಾಜಿಕ ಸಂಘಟನೆ ಎಂಬ ಹೆಗ್ಗಳಿಕೆ ಗಳಿಸಿದ ದೇಶಭಕ್ತ ಸಂಘಟನೆ ಆರೆಸ್ಸೆಸ್ ಆಗಿದೆ. ಆಗ ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಜವಾಹರಲಾಲ ನೆಹರು ಪ್ರಧಾನಿಯಾಗಿದ್ದರು. ಆಗ ಆರೆಸ್ಸೆಸ್ ದೇಶ ಭಕ್ತ ಸಂಘಟನೆ ಎಂದು ಪರೇಡ್ ನಲ್ಲಿ ಅವಕಾಶ ಕೊಟ್ಟಿತು. ಆದರೆ ಪ್ರಿಯಾಂಕ್ ಖರ್ಗೆಯವರು ಇದನ್ನು ತಿಳಿದುಕೊಂಡಿದ್ದರೆ ಇಂದು ಆರೆಸ್ಸೆಸ್ ಅನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಿರಲಿಲ್ಲ ಎಂದು ಇಟಗಿ ಹೇಳಿದರು.
ದಲಿತರು ಮತ್ತು ಹಿಂದುಳಿದ ವರ್ಗದವರಲ್ಲಿ ಒಡಕು ಉಂಟು ಮಾಡಿ ಒಡೆದು ಆಳಬೇಕೆಂಬ ನೀಚ ಮನಸ್ಥಿತಿಗೆ ಕಾಂಗ್ರೆಸ್ ನವರು ಇಳಿದಿದ್ದಾರೆ. ಇದನ್ನು ನಮ್ಮ ಜನ ಅರಿಯತೊಡಗಿದ್ದಾರೆ. ಈಗ ಸಂಘದ ಕಾರ್ಯಾಚಟುವಟಿಕೆ ನೋಡಿ ಕಾಂಗ್ರೆಸ್ ನವರು ಹತಾಶೆಗೊಂಡಿದ್ದು ಇದರ ಭಾಗವಾಗಿಯೇ ಸಂಘವನ್ನು ನಿಷೇಧ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಬಡಬಡಿಸುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.