ಯಾದಗಿರಿಯಲ್ಲಿ ಪೆಟ್ರೋಲ್ ಕೊರತೆ ಆತಂಕ : ಬಂಕ್ ಗಳಲ್ಲಿ ಜಮಾಯಿಸಿದ ಜನ

ಯಾದಗಿರಿ : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಪೆಟ್ರೋಲ್-ಡೀಸೆಲ್ ಕೊರತೆ ಉಂಟಾಗಬಹುದು ಎಂಬ ವದಂತಿಯಿಂದ ಆತಂಕಗೊಂಡ ಯಾದಗಿರಿ ನಗರದ ನಿವಾಸಿಗಳು ಮಂಗಳವಾರ ರಾತ್ರಿ ಪೆಟ್ರೋಲ್ ಬಂಕ್‌ಗಳತ್ತ ಧಾವಿಸಿದ ಘಟನೆ ನಡೆದಿದೆ.
ರಾತ್ರಿ ಸುಮಾರು 10.30ರಿಂದ 11.30ರವರೆಗೆ ನಗರದ ಶಿವಂ ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಬಂಕ್‌ಗಳಲ್ಲಿ ನೂರಾರು ವಾಹನಗಳು ಜಮಾಯಿಸಿ ಇಂಧನ ತುಂಬಿಸಿಕೊಳ್ಳಲು ಜನರು ಹರಸಾಹಸ ಪಟ್ಟರು. ಕೆಲವು ಬಂಕ್‌ಗಳಲ್ಲಿ ಸ್ಟಾಕ್ ಇಲ್ಲ ಎಂಬ ಮಾಹಿತಿ ಹರಿದಾಡಿದ ಹಿನ್ನೆಲೆಯಲ್ಲಿ ಜನರಲ್ಲಿ ಗಾಬರಿ ಉಂಟಾಗಿ ತಕ್ಷಣವೇ ಪೆಟ್ರೋಲ್ ಹಾಕಿಸಿಕೊಳ್ಳಲು ಮುಂದಾದರು.
ವದಂತಿಗೆ ಕಿವಿ ಕೊಡಬೇಡಿ:
ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್ ಕೊರತೆ ಕುರಿತು ಹರಿದಾಡಿದ ವಿಡಿಯೋ, ಫೋಟೋ ಮತ್ತು ಸಂದೇಶಗಳ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ಯಾವುದೇ ರೀತಿಯ ಇಂಧನ ಕೊರತೆ ಇಲ್ಲ. ಯಾದಗಿರಿ ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಲ್ಲಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.






