ಬಂಜಾರಾ ಸಂಸ್ಕೃತಿ ಸಂರಕ್ಷಣೆ, ತಾಂಡಾಗಳ ಅಭಿವೃದ್ಧಿಗೆ ಆದ್ಯತೆ ನೀಡಿ: ಮಹೇಶ್ ನಾಯಕ್

ಹುಣಸಗಿ: ಹುಣಸಗಿ ತಾಲೂಕು ಸೇರಿದಂತೆ ಯಾದಗಿರಿ ಜಿಲ್ಲೆಯ ತಾಂಡಾಗಳಲ್ಲಿನ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಬಂಜಾರಾ ಬ್ರಿಗೇಡ್ ಮೊದಲ ಆದ್ಯತೆ ನೀಡಬೇಕು ಎಂದು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹೇಶ ನಾಯಕ ಹೇಳಿದರು.
ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಂಜಾರಾ ಬ್ರಿಗೇಡ್ನ ಜಿಲ್ಲಾ ಘಟಕ, ವಿಭಾಗೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿ, ರಾಜ್ಯದಲ್ಲಿ ತಾಂಡಾಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಮೀಸಲಿಡಲಾಗುತ್ತಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅನೇಕ ತಾಂಡಾಗಳು ಇಂದಿಗೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ಅಸಹಾಯಕರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ನಾಗೇಶ ನಾಯಕ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ನೂರಾರು ತಾಂಡಾಗಳಿದ್ದು, ಪ್ರತಿಯೊಂದು ತಾಂಡವೂ ತನ್ನದೇ ಆದ ವಿಶೇಷತೆ ಹೊಂದಿದೆ. ಬಂಜಾರಾ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು.
ಗೌರವಾಧ್ಯಕ್ಷ ಲಕ್ಷ್ಮಣ ಚವ್ಹಾಣ ಹಾಗೂ ಮುಖಂಡ ತಾರಾನಾಥ ಚವ್ವಾಣ ಮಾತನಾಡಿ, ಬಂಜಾರಾ ಸಮುದಾಯವು ಶತಮಾನಗಳಿಂದ ತನ್ನದೇ ಆದ ಉಡುಗೆ-ತೊಡುಗೆ, ಭಾಷೆ ಮತ್ತು ಸಂಸ್ಕೃತಿಯ ಮೂಲಕ ವಿಶಿಷ್ಟ ಗುರುತನ್ನು ಉಳಿಸಿಕೊಂಡಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಸಮುದಾಯದ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಪದಾಧಿಕಾರಿಗಳು ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ನೀಡುವುದರ ಜೊತೆಗೆ ವ್ಯಸನಮುಕ್ತ ತಾಂಡಾಗಳ ನಿರ್ಮಾಣಕ್ಕೂ ಸಂಕಲ್ಪ ತೊಡಬೇಕು ಎಂದರು.
ಈ ಸಂದರ್ಭ ಜಿಲ್ಲಾ ಬಂಜಾರ ಬ್ರಿಗೇಡ್ ಅಧ್ಯಕ್ಷ ರಮೇಶ ರಾಠೋಡ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ನಾಯಕ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ತಿಪ್ಪಣ್ಣ ರಾಠೋಡ, ವಿಠ್ಠಲ ಚವ್ವಾಣ, ಬಾಬು ರಾಠೋಡ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ತಾರಾನಾಯಕ (ವಜ್ಜಲ ತಾಂಡಾ), ನಂದಕುಮಾರ, ಶಿವು ನಾಯಕ, ರಾಮು ನಾಯಕ, ದತ್ತು ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಗದೀಶ ರಾಠೋಡ ಸ್ವಾಗತಿಸಿ ನಿರೂಪಿಸಿದರು. ಸಂತೋಷ ವಂದಿಸಿದರು.






