ಯಾದಗಿರಿ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆ
ತುರ್ತು ಪರಿಹಾರ ಪ್ಯಾಕೇಜ್‌ಗೆ AIKKMS ಒತ್ತಾಯ

ಯಾದಗಿರಿ: ಜಿಲ್ಲೆಯಾದ್ಯಂತ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಪರಿಗಣಿಸಿ ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ತಕ್ಷಣವೇ ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸಿ ತುರ್ತು ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ 11 ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಶರಣಗೌಡ ಗೂಗಲ್, ಶಹಾಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಪರಿಗಣಿಸಿ ಗ್ರೌಂಡ್ ಸರ್ವೇಗೆ ಆದೇಶಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದರೂ, ಉಳಿದ ಐದು ತಾಲೂಕುಗಳಲ್ಲಿಯೂ ಬರದ ತೀವ್ರ ಪರಿಣಾಮ ಕಂಡುಬರುತ್ತಿದ್ದು, ಅವುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ, ಮೆಕ್ಕೆಜೋಳ, ಹೆಸರು ಹಾಗೂ ಎಳ್ಳು ಸೇರಿದಂತೆ ವಿವಿಧ ಬೆಳೆಗಳು ಶೇ.60ಕ್ಕೂ ಹೆಚ್ಚು ಹಾನಿಗೊಳಗಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶಗಳಾದ ಶಹಾಪುರ, ಸುರಪುರ ಹಾಗೂ ಹುಣಸಗಿ ಭಾಗಗಳಲ್ಲಿ ಕಾಲುವೆಗಳ ಕೊನೆಯ ಭಾಗಕ್ಕೆ ನೀರು ತಲುಪದ ಕಾರಣ ಶೇ.30ರಿಂದ 40ರಷ್ಟು ಬೆಳೆ ಹಾನಿಯಾಗಿದೆ ಎಂದರು.
ಅಂತರ್ಜಲ ಮಟ್ಟ ಕುಸಿತದಿಂದ ಗುರುಮಠಕಲ್ ಹಾಗೂ ಯಾದಗಿರಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಹಲವೆಡೆ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್‌ಗಳ ಮೇಲೆ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆ ತಿಳಿಸಿತು. ಹಸಿರು ಮೇವು ಕೊರತೆಯಿಂದ ರೈತರು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಥವಾ ಗೋಶಾಲೆಗಳಿಗೆ ಒಪ್ಪಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್ ಮಾತನಾಡಿ, ರಸಗೊಬ್ಬರ, ಬೀಜ ಹಾಗೂ ಕೃಷಿ ಕೂಲಿಗೆ ಮಾಡಿದ ವೆಚ್ಚವೂ ವಾಪಸ್ ಬಾರದ ಕಾರಣ ರೈತರು ಬ್ಯಾಂಕ್ ಹಾಗೂ ಖಾಸಗಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಳೆ ಕೈಕೊಟ್ಟಿರುವುದರಿಂದ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚ ಭರಿಸುವುದೂ ಕಷ್ಟವಾಗಿದೆ ಎಂದು ಹೇಳಿದರು.
ಉದ್ಯೋಗದ ಕೊರತೆಯಿಂದ ಸಾವಿರಾರು ರೈತರು ಮತ್ತು ಕೃಷಿ ಕಾರ್ಮಿಕರು ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆ ಸರ್ಕಾರದ ಗಮನ ಸೆಳೆಯಿತು.
ಬರದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವುದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವುದು ಮತ್ತು ರೈತರ ಸಾಲ ಸಮಸ್ಯೆಗೆ ತುರ್ತು ಪರಿಹಾರ ಕಲ್ಪಿಸುವಂತೆ AIKKMS ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಭೀಮರೆಡ್ಡಿ ಹಿರೇಬಾನಾರ್, AIUTUC ಕಾರ್ಮಿಕರ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ವಿ.ಜಿ.ದೇಸಾಯಿ, ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ಸುಭಾಷ್ ಚಂದ್ರ ಭಾವನೋರ್, ಸಿದ್ದಪ್ಪ ಇಮ್ಲಾಪುರ್, ರಾಜು ಇಮ್ಲಾಪುರ್, ರವಿ ಬೋಳಲ್ಲಿ, ತಿಮ್ಮಯ್ಯ ಕೊನೇರ್, ನಿಂಗಪ್ಪ ಕರಳಿ, ಶಂಕರಪ್ಪ ಚಡಬೊ, ಕೃಷ್ಣಗೌಡ ಕಲಾಲ್, ಮರಿಯಪ್ಪ ಶಂಕರಬಂಡಿ, ಮರಿಯಪ್ಪ ಕೋಟೆಕಲ್, ನಿಂಗಪ್ಪ ಚಳಗೇರಿ, ಶಿವಪ್ಪ, ರಾಮಯ್ಯ ಕಾನಳ್ಳಿ, ಸರ್ವರಸಾಬ್ ಹುಲ್ಕಲ್, ಮಲ್ಲಮ್ಮ ಅಂಬಿಗೇರ, ಬಸ್ಸಮ್ಮ ನೇಕಲ್, ಅರವಿಂದ್, ಶೇಕಪ್ಪ, ಮಲ್ಲಪ್ಪ, ಸುಬ್ಬಣ್ಣ, ಚಂದಪ್ಪ, ಮೈಬುಬ್ಬಿ ಸೇರಿದಂತೆ ನೂರಾರು ರೈತರು ಹಾಗೂ ಕಾರ್ಮಿಕರು ಭಾಗವಹಿಸಿದ್ದರು.






