ಎಸ್‌ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಸುರಪುರದಲ್ಲಿ ಪ್ರತಿಭಟನೆ

ಸುರಪುರ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆಯ ವತಿಯಿಂದ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಎಸ್‌ಐಆರ್ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಇದರಿಂದ ಕೋಟ್ಯಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರಂ ನಂ. 7 ಅನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಅಲ್ಪಸಂಖ್ಯಾತರು, ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಮತದಾರರ ಹೆಸರುಗಳನ್ನು ತೆಗೆದುಹಾಕಲು ಈ ಅರ್ಜಿಯನ್ನು ಬಳಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವಕರ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ ಎಂದು ದೂರಿದ ಮುಖಂಡರು, ದೇಶದಲ್ಲಿ ಕೆಲವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿ, ಇತರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬೆಳವಣಿಗೆಗಳಿಗೆ ಕಾರಣವಾಗಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ 2023ರ ಕಾನೂನನ್ನು ರದ್ದುಗೊಳಿಸಬೇಕು. ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಾಗಬೇಕು ಹಾಗೂ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂದು ಆಗ್ರಹಿಸಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಹುಸೇನ್ ಸಾಬ್ ಕೆ.ಎ.ಸರಕಾವಸ್ ಅವರ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಲ್ಲಯ್ಯ ಕಮತಗಿ, ಮಲ್ಲಿಕಾರ್ಜುನ ಕ್ರಾಂತಿ, ಅಹ್ಮದ್ ಪಠಾಣ್, ಅಯ್ಯಣ್ಣ ಹಾಲಭಾವಿ, ದೇವೇಂದ್ರಪ್ಪ ಪತ್ತಾರ, ಹನುಮಂತ್ರಾಯ ಚಂದ್ಲಾಪುರ, ಸಾಹೇಬಗೌಡ ಮದಲಿಂಗನಾಳ, ನಾಗಣ್ಣ ಕಲ್ಲದೇವನಹಳ್ಳಿ, ಶಿವಲಿಂಗ ಹಸನಾಪುರ, ವೆಂಕಟೇಶ ಬೇಟೆಗಾರ, ನಿಂಗಣ್ಣ ಗೋನಾಲ, ಮಾನಪ್ಪ ಸುಗೂರ, ಎಂ. ಪಟೇಲ್, ವಿಶ್ವರಾಜ ಚಂದ್ಲಾಪುರ, ಕಾಮರಾಯ ಮದಲಿಂಗನಾಳ, ಬುಚ್ಚಪ್ಪ ನಾಯಕ, ಮಾನಪ್ಪ ಬಿಜಾಸಪುರ, ಮಹೇಶ ಹುಲ್ಪೇನವರ, ನಬಿಲಾಲ ಮಕಾಂದಾರ, ವೆಂಕಟೇಶಗೌಡ ಕುಪಗಲ್, ತಿಪ್ಪಣ್ಣ ಜಂಪಾ, ವೆಂಕಪ್ಪ ಪರಾಶಿ, ವೆಂಕಟೇಶ ದೇವರಗೋನಾಲ, ಇಮ್ತಿಯಾಜ್, ಶಿವಶಂಕರ ಹೊಸಮನಿ, ಖಾಜಾ ಅಜ್ಮೀರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.






