ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಿ : ಡಿಸಿ ಡಾ.ಸುಶೀಲಾ ಬಿ.

ಯಾದಗಿರಿ: ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಅಲೆಮಾರಿ/ಅರೆ ಅಲೆಮಾರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಹ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ಸರ್ಕಾರದ ವಿವಿಧ ಯೋಜನೆಗಳ ಲಾಭದಿಂದ ವಂಚಿತರಾಗಬಾರದು. ಸಂಬಂಧಿಸಿದ ಅಧಿಕಾರಿಗಳು ದಾಖಲಾತಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.
ಚಾಮನಾಳ ಗ್ರಾಮದಲ್ಲಿ 2025-26ನೇ ಸಾಲಿಗೆ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ನಿವೇಶನ ರಹಿತ ಕುಟುಂಬದವರಿಗೆ, 60 ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಪುನರ್ ಪರಿಶೀಲನಾ ವರದಿ ಸಲ್ಲಿಸಬೇಕು. ಇದಕ್ಕಾಗಿ ಯಾದಗಿರಿ ನಗರಸಭೆ ಅಧಿಕಾರಿಗಳು, ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಪ್ರತಿನಿಧಿ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಒಳಗೊಂಡ ಮೂವರು ಸದಸ್ಯರ ತಂಡವನ್ನು ರಚಿಸಿ, ದಾಖಲಾತಿಗಳನ್ನು ಪರಿಶೀಲಿಸುವ ಜೊತೆಗೆ ಕ್ಷೇತ್ರ ಮಟ್ಟದಲ್ಲಿ ಭೇಟಿ ನೀಡಿ, ಮರು ಪರಿಶೀಲಿಸಿ, ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಈ ವೇಳೆ ಡಿ.ದೇವರಾಜ ಅರಸು ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಯೋಜನೆಗಳ ಬಗ್ಗೆ ಪರಿಶೀಲಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ನಾರಾಯಣಕರ,ವ್ಯವಸ್ಥಾಪಕರಾದ ಸಾಬಯ್ಯ, ಭೀಮರಾಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







