ಯಾದಗಿರಿ ಮತಕ್ಷೇತ್ರದ ವಿದ್ಯುತ್ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

ಯಾದಗಿರಿ: ತಮ್ಮ ಕ್ಷೇತ್ರದ ವ್ಯಾಪ್ತಿಯ ಅನೇಕ ಊರುಗಳಲ್ಲಿ ವಿದ್ಯುತ್ ಸಮಸ್ಯೆಗಳು ಕಾಡುತ್ತಿವೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರು ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ಯಾದಗಿರಿ ವಿಧಾನ ಸಭಾ ಮತಕ್ಷೇತ್ರಕ್ಕೆ ಸಂಬಂಧಪಟ್ಟ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಏಳು ತಾಸು ವಿದ್ಯುತ್ ಕಡ್ಡಾಯವಾಗಿ ನೀಡಬೇಕು, ವಿದ್ಯುತ್ ಕಂಬ, ತಂತಿಗಳು ಹಳೆಯದಾದಲ್ಲಿ ಹೊಸದನ್ನು ಅಳವಡಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಹೊಸ ತಾಲೂಕು ವಡಗೇರಾದಲ್ಲಿ ಉಪವಿಭಾಗ ಕಚೇರಿ ಆರಂಭಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿ ಅನೇಕ ತಿಂಗಳುಗಳೇ ಕಳೆದಿವೆ. ಅದು ಕೂಡಲೇ ಕಾರ್ಯಗತವಾಗುವಂತೆಯೇ ಕ್ರಮ ತೆಗೆದುಕೊಳ್ಳಬೇಕು, ಗುರುಸಣಗಿ ಸಮೀಪದ ಗಡ್ಡೆಸೂಗುರು ಮತ್ತು ಅಡಕಬಂಡಲ್ ಗ್ರಾಮಗಳಲ್ಲಿ 110 ಕೆವಿ ಉಪ ಕೇಂದ್ರಗಳ ಕುರಿತಾದ ಪ್ರಸ್ತಾವನೆಯೂ ಬಹಳ ದಿನಗಳಿಂದ ಬಾಕಿ ಇದ್ದು ಅದು ಕೂಡಾ ಮಾಡುವಂತೆಯೇ ಶಾಸಕ ಪಾಟೀಲ್ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಎಸ್ ಇ ಖಂಡಪ್ಪ, ಎಇಇಗಳಾದ ರಾಘವೇಂದ್ರ, ರಾಜೇಶ ಹಿಪ್ಪರಗಿ, ಶಂಕರ ಗುತ್ತಿ, ಸಂಜೀವಕುಮಾರ ಸೇರಿದಂತೆಯೇ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಅಧಿಕಾರಿ,ಸಿಬ್ಬಂದಿ ಇದ್ದರು.
ಜನರ ಸಮಸ್ಯೆಗಳಿಗೆ ಸ್ಪಂದಿಸಿ :
ಬಾಕಿ ಇರುವ ಟೆಂಡರ್ ಗಳನ್ನು ಶೀಘ್ರವಾಗಿ ಕರೆದು, ಉಳಿದ ಕಾರ್ಯಗಳನ್ನು ಪೂರೈಸಬೇಕು, ವಿನಾಕಾರಣ ವಿಳಂಬ ಮಾಡಿದ್ದಲ್ಲಿ ನಾನಂತು ಸುಮ್ಮನೆ ಕುರುವವನಲ್ಲ, ಯಾದಗಿರಿ ತಾಲೂಕು ಸೇರಿದಂತೆ ವಡಗೇರಾ, ನಾಯ್ಕಲ್ ಇತರೆ ಗ್ರಾಮಗಳಲ್ಲಿ ಇರುವ ಟಿಸಿ ಸಮಸ್ಯೆಗಳನ್ನು ಬಗೆಹರಿಸಿ, ವರದಿ ಸಲ್ಲಿಸಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.







