ಯಾದಗಿರಿ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಒದಗಿಸಲು 2,004 ಕೋಟಿ ರೂ. ಕಾಮಗಾರಿ; ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಯಾದಗಿರಿ : ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಂದಾಜು ಮೊತ್ತ 2,004.00 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಅವರು ಶೂನ್ಯವೇಳೆ ಪ್ರಸ್ತಾವನೆ ಮೇಲಿನ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಯಾದಗಿರಿ ಜಿಲ್ಲೆಯ 6 ತಾಲ್ಲೂಕುಗಳ 465 ಗ್ರಾಮಗಳ 710 ಜನವಸತಿ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಅಂದಾಜು ಮೊತ್ತ 2,004.00 ಕೋಟಿ ರೂ.ಗಳಲ್ಲಿ ನಾರಾಯಣಪುರ ಜಲಾಶಯದಿಂದ ಪ್ರತಿ ಮನೆಗೆ 55 ಎಲ್.ಪಿ.ಸಿ.ಡಿಯಂತೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, ಮುಕ್ತಾಯದ ನಂತರ ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಸಿಗಲಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಬಹುದಾದ ಸುಮಾರು 272 ಹಳ್ಳಿಗಳನ್ನು ಗುರುತಿಸಲಾಗಿದ್ದು, ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ 10 ಖಾಸಗಿ ಬೋರ್ವೆಲ್ಗಳಿಂದ ಹಾಗೂ 2 ಖಾಸಗಿ ಟ್ಯಾಂಕರ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯಾತ್ಮಕ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ಕೂಲಂಕುಷವಾಗಿ ಗಮನಿಸಿ ಕೊಳವೆ ಬಾವಿಗಳು ಬತ್ತಿ ಹೋದಲ್ಲಿ ಪ್ರಥಮ ಆದ್ಯತೆ ಮೇರೆಗೆ ಬಾಡಿಗೆ ಆಧಾರದ ಮೇಲೆ ಕೊಳವೆ ಬಾವಿಗಳನ್ನು ಪಡೆಯಲು, ಇದು ಲಭ್ಯವಿಲ್ಲದಿದ್ದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು, ಕೊಳವೆ ಬಾವಿಗಳನ್ನು ಫ್ಲಷಿಂಗ್ ಮಾಡಿ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಅನಿವಾರ್ಯ ಸಂದರ್ಭದಲ್ಲಿ ಸಂಬಂಧಪಟ್ಟ ಭೂ ವಿಜ್ಞಾನಿಯವರ ವರದಿಯನುಸಾರ ಹೊಸದಾಗಿ ಬೋರ್ವೆಲ್ ಕೊರೆಯಿಸಲು ಕ್ರಮವಹಿಸಿ ತುರ್ತು ಕಾಮಗಾರಿಗಳ ಕ್ರಿಯಾ ಯೋಜನೆಯನ್ನು 360.00 ಲಕ್ಷ ರೂ. ಗಳಲ್ಲಿ ತಯಾರಿಸಲಾಗಿದೆ ಎಂದರು.
ಯಕ್ತಾಪೂರ ಗ್ರಾಮ ಪಂಚಾಯತಿಯು ಒಟ್ಟು 13 ಹಳ್ಳಿಗಳನ್ನು ಒಳಗೊಂಡಿದ್ದು, ಪ್ರಸ್ತುತ ಯಕ್ತಾಪೂರ ಆಶ್ರಯ ಕಾಲೋನಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಈ ಗ್ರಾಮಕ್ಕೆ ಪ್ರತಿ ದಿನ 6 ಟ್ರಿಪ್ಗಳಂತೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದ ಹಳ್ಳಿಗಳಲ್ಲಿ ಮುಂಬರುವ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳಿಗೆ ಖಾಸಗಿ ಬೋರ್ವೆಲ್ಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಅವರ ಪ್ರಶ್ನೆ: ಯಾದಗಿರಿ ಜಿಲ್ಲೆಯಲ್ಲಿ ಸುಮಾರು 250 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೇಸಿಗೆ ಶುರುವಾಗುವ ಮುನ್ನವೇ ನೀರಿನ ಸಮಸ್ಯೆ ಉಂಟಾಗಿದ್ದು, ಕುಡಿಯುವ ನೀರಿಗಾಗಿ ಸುರಪುರ ತಾಲ್ಲೂಕಿನ ಕಂಭಾವಿ ಸಮೀಪದ ಯಕ್ತಾಪೂರ ಗ್ರಾಮದಲ್ಲಿ ನಿವಾಸಿಗಳು ನೀರಿಗಾಗಿ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ನೀರಿನ ಸಮಸ್ಯೆ ಬಗ್ಗೆ ಕೇಳಿದರೆ ಇಲ್ಲಿನ ಜನರ ಕಣ್ಣಾಲಿಗಳಲ್ಲಿ ನೀರಾಡುತ್ತದೆ.
ಯಕ್ತಾವೂರ ಗ್ರಾಮ ಪಂಚಾಯಿತಿ 13 ಹಳ್ಳಿಗಳನ್ನೊಳಗೊಂಡ ದೊಡ್ಡ ಗ್ರಾಮ ಪಂಚಾಯತ್ ಕೇಂದ್ರವಾಗಿದ್ದು, ನಾಲೈದು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಕಂಡು ಬಂದಿರುತ್ತದೆ. ಬಿರು ಬೇಸಿಗೆ ಆರಂಭದ ದಿನಗಳಲ್ಲಿಯೇ ನೀರಿನ ಸಮಸ್ಯೆಯ ಮುನ್ಸೂಚನೆಯಾಗಿದ್ದು, ಮುಂದಿನ ದಿನಮಾನದಲ್ಲಿ ಯಾವ ರೀತಿ ನೀರಿನ ಸಮಸ್ಯೆಯಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಹಾಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುವುದಲ್ಲದೆ ಶಾಶ್ವತ ನೀರಿನ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಅವರು ಶೂನ್ಯ ವೇಳೆಯಲ್ಲಿ ಪ್ರಶ್ನೆಯನ್ನು ಕೇಳಲಾಯಿತು.







