ಸೈದಾಪುರ | ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಯಶಸ್ಸಿನ ಗುರಿ ಸಾಧಿಸಿ: ವೀರಪ್ಪ ಕನ್ನಳ್ಳಿ

ಸೈದಾಪುರ: ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಧೃತಿಗೆಡದೆ ಆತ್ಮವಿಶ್ವಾಸದಿಂದ ಸಿದ್ಧತೆ ನಡೆಸಬೇಕು. ಬದುಕು ಬದಲಿಸುವ ಯಶಸ್ಸಿನ ಗುರಿಯೊಂದಿಗೆ ಸಂಕಲ್ಪ ಮಾಡಿ ಮುನ್ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹಾಗೂ ವಿದ್ಯಾವರ್ಧಕ ಪ್ರೌಢಶಾಲೆಗೆ ಭೇಟಿ ನೀಡಿ, ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿದ ಬಳಿಕ ಅವರು ಮಾತನಾಡಿದರು.
ಎಸೆಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟವಾಗಿದೆ. ಉತ್ತಮ ಫಲಿತಾಂಶ ಪಡೆಯಲು ವಿಷಯಗಳ ಸ್ಪಷ್ಟ ತಿಳಿವಳಿಕೆ, ನಿರಂತರ ಅಭ್ಯಾಸ ಹಾಗೂ ಸಮಯ ನಿರ್ವಹಣೆ ಬಹಳ ಮುಖ್ಯ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರ ಜತೆಗೆ ಉತ್ತರ ಬರೆಯುವ ಕೌಶಲವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆಗೆ ವಿಶೇಷ ಗಮನಹರಿಸಿ, ಶೂನ್ಯ ಅನುತ್ತೀರ್ಣತೆ ಸಾಧನೆಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೈದಾಪುರ ವಲಯದ ಇಸಿಒ ಚಾಂದಸಾಬ್, ಸಿಆರ್ಪಿ ಲಿಂಗಾರಡ್ಡಿ ಗಬ್ಬೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.




