ಯಾದಗಿರಿ| ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಯಾದಗಿರಿ: ಎಲ್ಲ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘಟನೆಯನ್ನು ಪರಿಣಾಮಕಾರಿಯಾಗಿ ಬಲಪಡಿಸಿಬೇಕು ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಬಸವರಾಜ ತೆಗ್ಗಿಳ್ಳಿ ಹೇಳಿದರು.
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘಟನೆ ಬಲಿಷ್ಠವಾಗಲು ಪ್ರತಿಯೊಬ್ಬರ ಸಹಕಾರ ತುಂಬ ಅಗತ್ಯವಿದೆ. ಹೀಗಾಗಿಯೇ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ವಿಶೇಷವಾದ ಆಸಕ್ತಿ ವಹಿಸುವ ಮೂಲಕ ಸಂಘಟನೆಯನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಂತೇಶ್ ಹಲಗಿಮನಿ ಮಾತನಾಡಿ, ಅನುದಾನಿತ, ವಸತಿ ಶಾಲೆಗಳು, ಬಿಇಒ ಮತ್ತು ಬಿಆರ್‌ಸಿ ಕಾರ್ಯಾಲಯ ಸಿಬ್ಬಂದಿ, ಡಿಡಿಪಿಐ ಮತ್ತು ಡಯಟ್ ನೌಕರರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಎಲ್ಲ ನೌಕರರು ಸಂಘದ ಸದಸ್ಯತ್ವ ಪಡಯಬೇಕು ಎಂದು ತಿಳಿಸಿದರು.
ಒಗ್ಗಟ್ಟಿನಿಂದ ಇರುವುದರಿಂದಾಗಿ ಸರಕಾರದಿಂದ ಸೌಲಭ್ಯಗಳನ್ನು ಸಹ ಪಡೆಯಲು ಸಾಧ್ಯವಾಗುತ್ತದೆ. ಎಲ್ಲರೂ ಕೂಡ ಸ್ವಯಂ ಪ್ರೇರಿತರಾಗಿ ಸಂಘದ ಸದಸ್ಯತ್ವ ಪಡೆಯಲು ಮುಂದಾಗಬೇಕು. ಇದರಿಂದಾಗಿ ತುಂಬ ಅನುಕೂಲವಾಗುತ್ತದೆ ಎಂಬುದು ನಾವು ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅನುದಾನಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವು ಪಾಟೀಲ್ ಅವರು ಮಾತನಾಡಿದರು. ಇದೇ ವೇಳೆ ಬನ್ನಪ್ಪ ಸುಂಕದ್ ಇವರನ್ನು ನೂತನವಾಗಿ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ವಣಿಕ್ಯಾಳ, ರಾಜ್ಯ ತಾಂತ್ರಿಕ ಸಹಾಯಕ ಪ್ರಕಾಶ್ ಬಡಿಗೇರ, ಯೊಸುಮಿತ್ರ, ಷಣ್ಮುಖ ನುಚ್ಚಿ, ಮಲ್ಲಣಗೌಡ, ಯಮನೂರಪ್ಪ, ಸಾಬಣ್ಣ ಜುಬೇರಾ, ದೇವಿಂದ್ರಪ್ಪ ಚಪೇಟ್ಲಾ, ಶಿವು ಪಾಟೀಲ್, ಪ್ರೇಮಕುಮಾರ್, ಚಂದ್ರಶೇಖರ ಸಾಹು, ಅಯ್ಯಣ್ಣ ಬಡಿಗೇರ ಸೇರಿದಂತೆ ಇನ್ನಿತರರಿದ್ದರು.