ಹಿರಿಯ ಕಾಂಗ್ರೆಸ್ ನಾಯಕ ಎ.ಸಿ.ಕಾಡ್ಲೂರು ನಿಧನ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ ಕಂಬನಿ

ಎ.ಸಿ.ಕಾಡ್ಲೂರು
ಯಾದಗಿರಿ: ಹಿರಿಯ ಕಾಂಗ್ರೆಸ್ ಮುಖಂಡ ಎ.ಸಿ.ಕಾಡ್ಲೂರು ಅವರ ಅಕಾಲಿಕ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಾತ್ಯಾತೀತ ನಿಲುವು ಹಾಗೂ ಸಮಾಜ ಸೇವೆಯಲ್ಲಿ ಸದಾ ಸಕ್ರಿಯರಾಗಿದ್ದ ಎ.ಸಿ.ಕಾಡ್ಲೂರು ಅವರು, ಎಲ್ಲಾ ವರ್ಗದ ಮತ್ತು ಧರ್ಮದ ಜನರ ಸೇವೆಯ ಮೂಲಕ ತಮ್ಮ ರಾಜಕೀಯ ರಂಗವನ್ನು ಪ್ರವೇಶಿಸಿದ್ದರು. ಕೇವಲ ರಾಜಕೀಯ ಹಾಗೂ ಜನಸೇವೆಯಷ್ಟೇ ಅಲ್ಲದೆ, ಶೈಕ್ಷಣಿಕವಾಗಿ ಹಿಂದುಳಿದಿದ್ದ ಯಾದಗಿರಿ ಜಿಲ್ಲೆಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ರಂಗದ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ್ದರು.
ದಶಕಗಳ ಕಾಲ ಜನಪರ ಸೇವೆ ಸಲ್ಲಿಸಿದ ಜನಾನುರಾಗಿ ನಾಯಕನ ಅಗಲಿಕೆ ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಅಗಲಿದ ನಾಯಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮುಖಂಡರು ಪ್ರಾರ್ಥಿಸಿದ್ದಾರೆ.




