ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹಲವು ಕ್ರಮ : ಸಚಿವ ಸಂತೋಷ ಲಾಡ್

ಯಾದಗಿರಿ : ರಾಜ್ಯದ ಅಸಂಘಟಿತ ವಲಯದ ಎಲ್ಲ ವರ್ಗಗಳ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಗುರುತಿಸಿರುವ 101 ಅಸಂಘಟಿತ ಕಾರ್ಮಿಕ ವರ್ಗಗಳ ಕಾರ್ಮಿಕರು ತಕ್ಷಣ ನೋಂದಣಿ ಮಾಡಿಕೊಂಡು ಸ್ಮಾರ್ಟ್ ಕಾರ್ಡ್ ಮೂಲಕ ಸವಲತ್ತುಗಳ ಲಾಭ ಪಡೆದುಕೊಳ್ಳುವಂತೆ ರಾಜ್ಯ ಕಾರ್ಮಿಕ ಖಾತೆ ಸಚಿವರಾದ ಸಂತೋಷ್ ಲಾಡ್ ಅವರು ಹೇಳಿದರು.
ನಗರದ ಶುಭಂ ಪೆಟ್ರೋಲ್ ಪಂಪ್ ಹಿಂಭಾಗದ, ಪಾಟೀಲ್ ಕನ್ವೆನ್ಷನ್ ಹಾಲ್ ನಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಯಾದಗಿರಿ ಜಿಲ್ಲೆಯ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸುಮಾರು 101 ಅಸಂಘಟಿತ ಕಾರ್ಮಿಕ ವರ್ಗಗಳ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ತಕ್ಷಣ ಉಚಿತವಾಗಿ ನೋಂದಾಯಿಸಿಕೊಂಡು, ಸ್ಮಾರ್ಟ್ ಕಾರ್ಡ್ ಪಡೆದು ಸವಲತ್ತುಗಳ ಲಾಭ ಪಡೆಯುವಂತೆ ಸಲಹೆ ನೀಡಿದರು.
ರಾಜ್ಯದ ದುಡಿಯುವ ಜನರಲ್ಲಿ ಅಸಂಘಟಿತ ವಲಯದ ಪ್ರತಿಶತ 85 ರಷ್ಟು ಕಾರ್ಮಿಕರಿದ್ದಾರೆ. ವಿವಿಧ ವಲಯದಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ' ಯನ್ನುಅನುಷ್ಠಾನಗೊಳಿಸಲಾಗಿದೆ ಎಂದರು.
ಈ ಯೋಜನೆಯಡಿ 101 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದ್ದು, ಸುಮಾರು 35 ಲಕ್ಷ ಕಾರ್ಮಿಕರು ಒಳಗೊಂಡಿದ್ದಾರೆ. ಅವರಿಗೆ ಉಚಿತವಾಗಿ ನೊಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ 59,493 ಕಾರ್ಮಿಕರು ನೊಂದಣಿಯಾಗಿದ್ದು, ಅವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇಂತಹ ಅಸಂಘಟಿತ ಕಾರ್ಮಿಕರ ಅಪಘಾತ ಸಂಭವಿಸಿದಲ್ಲಿ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ 4 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ನೀಡಲಾಗುವುದು. ಆಶಾದೀಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ಉದ್ಯೋಗದಾತರು, ಉದ್ದಿಮೆದಾರರು ಉದ್ಯೋಗ ನೀಡಿದಲ್ಲಿ ಶೇ.50 ರಷ್ಟು ವೇತನ ಕಾರ್ಮಿಕ ಇಲಾಖೆಯಿಂದಲೇ ಭರಿಸಲಾಗುವುದೆಂದರು.
ಮೋಟಾರು ಸಾರಿಗೆ ಹಾಗೂ ಸಂಬಂಧಿತ ಕಾರ್ಮಿಕರಿಗೆ ಮತ್ತು ಸಿನಿ ಪರದೆ ಹಿಂದೆ ದುಡಿಯುವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರಿಗೆ, ಕಲಾವಿದರಿಗೆ, ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ) ಅಧಿನಿಯಮ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.
ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಬದಲಾವಣೆ ತರಲು ಸರ್ಕಾರ ಪಂಚಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಪ್ರತಿ ವರ್ಷ 60 ಸಾವಿರ ಕೋ ರೂ. ಗಳಂತೆ ಒಟ್ಟು 5 ವರ್ಷದಲ್ಲಿ 5 ಲಕ್ಷ ಕೋ ರೂ. ಒದಗಿಸುತ್ತಿದೆ. ಅಭಿವೃದ್ಧಿ, ಯೋಜನೆ, ಯೋಜನೆತರ, ಪೆನ್ಷನ್ ಯೋಜನೆಗಳಿಗೂ ಅನುದಾನ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರ್ ಕ್ಯಾಪಿಟಾ ಇನ್ಕಮ್ ಹಾಗೂ ಜಿಡಿಪಿ ಯಲ್ಲಿ ರಾಷ್ಟ್ರದಲ್ಲಿ ಮುಂಚೂಣಿ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. 500 ಕೋ ಜನರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ ವಿಶ್ವದ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.
ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸಹಾಯಹಸ್ತ ಚಾಚಿ ಅವರಿಗೆ ಮುಖ್ಯ ವಾಹಿನಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಮುಖ್ಯ ಎಂದ ಅವರು, ಈ ಭಾಗದ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಭೀ.ಗುಡಿಗೆ ವಸತಿ ಶಾಲೆಯೊಂದು ಮಂಜೂರು ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಅದರಂತೆ ಈ ಭಾಗದ ಸಮಸ್ಯೆಯಾಗಿರುವ ಕಾರ್ಮಿಕರ ಗುಳೆ ಸಮಸ್ಯೆ ಪರಿಹರಿಸಲು ಎಲ್ಲರೂ ಸಂಘಟಿತರಾಗಿ ಶ್ರಮಿಸುವುದು ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ವಿಧಾನ ಪರಿಷತ್ ಸದಸ್ಯ ಶ್ರೀ ತಿಪ್ಪಣ್ಣ ಕಮಕನೂರ್, ಶಾಸಕ ಶರಣಗೌಡ ಕಂದಕೂರ ಅವರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕರ ಪರ ಕಾರ್ಯ ವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಡಗೇರಾ ಹಾಗೂ ಗುರುಮಠಕಲ್ ಗೆ ಕಾರ್ಮಿಕ ಮಕ್ಕಳಿಗಾಗಿ ವಸತಿ ಶಾಲೆ ಮಂಜೂರು ಮಾಡುವಂತೆ ಸಚಿವರಿಗೆ ಕೋರಿದರು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಶಾಸಕ ರಾಜಾ ವೇಣುಗೋಪಾಲ್ ನಾಯಕ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಡಿಸಿ ಹರ್ಷಲ್ ಭೋಯರ್, ಜಿ.ಪಂ.ಸಿಇಓ ಲವೀಶ್ ಒರಡಿಯಾ, ಎಸ್.ಪಿ ಪೃಥ್ವಿಕ್ ಶಂಕರ್, ಲಿಡ್ಕರ್ ಸಂಸ್ಥೆ ಅಧ್ಯಕ್ಷ ಮುಂಡರಗಿ ನಾಗರಾಜ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಶಾದೀಪ ಯೋಜನೆಯಡಿ ವೇತನ ಮರುಪಾವತಿ ಚೆಕ್ ವಿತರಣೆ, ಖಾಸಗಿ ವಾಹನ ಚಾಲಕರ ಅಪಘಾತ ಮರಣ ಪರಿಹಾರ ಧನ ಸಹಾಯ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸಂವಿಧಾನದ ಪೀಠಿಕೆ ಬೋಧಿಸಿದರು. ಜಂಟಿ ಆಯುಕ್ತ ರವಿಕುಮಾರ್, ಇತರೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು.







