ಶಹಾಪುರ | ಮದ್ಯ, ಮಾದಕ ವಸ್ತುಗಳಿಂದ ಕುಟುಂಬಗಳ ವಿನಾಶ : ಶರಣಪ್ಪ ಸಲಾದಪುರ

ಶಹಾಪುರ: ಇಂದಿನ ಸಮಾಜ ಎದುರಿಸುತ್ತಿರುವ ಗಂಭೀರ ಸವಾಲುಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನವೂ ಒಂದು. ಈ ಪೀಡಿತ ವ್ಯಸನಗಳಿಂದಾಗಿ ಬಹಳಷ್ಟು ಕುಟುಂಬಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನಾಶವಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಕಳವಳ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 'ಮದ್ಯ ಮತ್ತು ಮಾದಕ ವಸ್ತುಗಳ ವಿರೋಧಿ ಜನಜಾಗೃತಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಗೃಹ ಹಿಂಸೆ ಹೆಚ್ಚುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜಾಲಕ್ಕೆ ಸಿಲುಕುತ್ತಿರುವುದು ಸಮಾಜದ ಭವಿಷ್ಯಕ್ಕೆ ದೊಡ್ಡ ಬೆದರಿಕೆಯಾಗಿದೆ. ಯುವಜನರು ದಾರಿ ತಪ್ಪದಂತೆ ನೋಡಿಕೊಳ್ಳುವುದು ಪೋಷಕರು, ಶಿಕ್ಷಕರು ಮತ್ತು ಇಡೀ ಗ್ರಾಮದ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಸಂಯಮ ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಕೇವಲ ಸರ್ಕಾರ ಅಥವಾ ಇಲಾಖೆಗಳಿಂದ ಮಾತ್ರ ಇದು ಸಾಧ್ಯವಿಲ್ಲ. ಗ್ರಾಮಸ್ಥರು ಶಕ್ತಿಯುತವಾಗಿ ಕೈಜೋಡಿಸಿದಾಗ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಶರಣಪ್ಪ ಸಲಾದಪುರ ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯಿತ್, ಮಹಿಳಾ ಸಂಘಗಳು ಹಾಗೂ ಸ್ಥಳೀಯ ಯುವಕ ಮಂಡಳಿಗಳು ಒಗ್ಗೂಡಿ ಶಿರವಾಳದಂತಹ ಗ್ರಾಮಗಳನ್ನು ನಶಮುಕ್ತಗೊಳಿಸಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಿಡಿಒ ಮಲ್ಲಿಕಾರ್ಜುನ ವಗ್ಗರ್, ಬಾಪುಗೌಡ ಶಿರವಾಳ, ಮರೆಪ್ಪ, ಆರೋಗ್ಯ ಇಲಾಖೆ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







