ಶಹಾಪುರ | ಬಸವಣ್ಣನವರ ತತ್ವಗಳನ್ನು ತಿರುಚುವ ಪ್ರಯತ್ನ: ಜ್ಞಾನಪ್ರಕಾಶ ಸ್ವಾಮೀಜಿ ಆರೋಪ

ಶಹಾಪೂರ : ಬಸವಣ್ಣನವರ ವಚನ ತತ್ವಗಳನ್ನು ತಿರುಚಿ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶಗಳನ್ನು ನಡೆಸುವ ಮೂಲಕ ಮೂಲ ತತ್ವಗಳನ್ನು ಮಲಿನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.
ನಗರದ ಸಿ.ಪಿ.ಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ‘ಬಸವಾದಿ ಶರಣರ ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಿದ್ಧಾಂತವು ದುಡಿಯುವ ವರ್ಗ ಹಾಗೂ ಕೃಷಿ ಆಧಾರಿತ ಬದುಕಿನ ತತ್ವಗಳ ಮೇಲೆ ನಿಂತಿದ್ದರೆ, ಕೆಲವರು ಮಂತ್ರ-ತಂತ್ರ ಹಾಗೂ ಮನುವಾದಿ ಚಿಂತನೆಗಳನ್ನು ಹೇರಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಮಾವೇಶದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಬಸವಣ್ಣನವರ ವಚನ ತತ್ವಗಳನ್ನು ಮರೆಮಾಚಿ ಸಮಾಜದಲ್ಲಿ ವಿಭಜನೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ದೇಶದಲ್ಲಿ ವಿವಿಧ ಧರ್ಮಗಳ ಜನರು ಶಾಂತಿಯುತವಾಗಿ ಬದುಕುತ್ತಿರುವ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಇಂತಹ ಸಮಾವೇಶಗಳಿಗೆ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಚಿಂತಕಿ ಕೆ. ನೀಲಾ ಮಾತನಾಡಿ, “ಹಿಂದೂ ಧರ್ಮ ಎಂಬುದು ಧರ್ಮವೇ ಅಲ್ಲ. ಬಸವಣ್ಣನವರ ವಚನ ತತ್ವವನ್ನು ಉಳಿಸುವ ಜವಾಬ್ದಾರಿ ಪ್ರಜ್ಞಾವಂತರ ಮೇಲಿದೆ” ಎಂದು ಹೇಳಿದರು.
ಇಂತಹ ಸಮಾವೇಶಗಳ ಮೂಲಕ ಸಾಂಸ್ಕೃತಿಕ ನಾಯಕರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಆರ್.ಜಿ. ಶೆಟಗಾರ ಮಾತನಾಡಿ, ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸಲು ಅವಕಾಶ ನೀಡಬಾರದು. ರಾಜ್ಯದ ಎಲ್ಲೆಡೆ ಇಂತಹ ಕಾರ್ಯಕ್ರಮಗಳು ನಡೆದರೆ ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಡಾ. ಮೀನಾಕ್ಷಿ ಬಾಳಿ ಮಾತನಾಡಿ, ಎಲ್ಲರೂ ಒಂದೇ ಧರ್ಮದವರು ಎಂದು ಹೇಳುವವರು ಮೊದಲು ಜಾತಿ ಭೇದ ತೊರೆಯಬೇಕು. ವೇದಗಳು ಶ್ರೇಷ್ಠವೆಂದು ಹೇಳುವ ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ಹಾಗೂ ಜಾತೀಯತೆ ಏಕೆ ಮುಂದುವರಿದಿದೆ ಎಂಬುದನ್ನು ಪ್ರಶ್ನಿಸಬೇಕು. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಸಮಾನ ಗೌರವ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಸಮಾವೇಶದಲ್ಲಿ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮಿಜೀ, ಕಡಕೋಳ ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಜೀ, ಜಿ.ಬಿ.ಪಾಟೀಲ, ಚಿಂತಕ ಆರ್.ಕೆ.ಹುಡಗಿ, ಚನ್ನಪ್ಪ ಆನೇಗುಂದಿ, ಡಾ.ರವೀಂದ್ರನಾಥ ಹೊಸ್ಮನಿ, ಚನ್ನಬಸ್ಸು ವನದುರ್ಗ,, ಶಿವಣ್ಣ ಇಜೇರಿ, ಸೇರಿದಂತೆ ವಿವಿಧ ಮಠಾಧೀಶರು, ಸಂಘಟನೆಗಳ ಮುಖಂಡರು, ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






