ಶಹಾಪುರ | ರೈತರಿಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಕಚೇರಿಗಳಿಗೆ ಮುತ್ತಿಗೆ: ಬಿಜೆಪಿ ಮುಖಂಡರ ಎಚ್ಚರಿಕೆ

ಶಹಾಪುರ: ಮುಂಗಾರು ಮತ್ತು ಹಿಂಗಾರು ಎರಡೂ ಬೆಳೆಗಳಿಗೆ ಸಕಾಲದಲ್ಲಿ ಮಳೆ ಬಾರದ ಕಾರಣ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ನೀರಿಲ್ಲದೆ ಜಮೀನುಗಳು ಬಣಗುಡುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೆ ತೆಲಂಗಾಣಕ್ಕೆ ಸಾವಿರಾರು ಕ್ಯೂಸೆಕ್ ನೀರು ಹರಿಸುವ ಮೂಲಕ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಸಿದ್ದಣಗೌಡ ಕಾಡಮನೋರ ಹಾಗೂ ಶಹಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಅಮೀನರಡ್ಡಿ ಯಾಳಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪದೆ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಆದರೆ, ಸರ್ಕಾರ ವಾರಾಬಂದಿ ಪದ್ಧತಿ ಜಾರಿಗೊಳಿಸುವ ಮೂಲಕ ಉಳಿದ ರೈತರನ್ನೂ ಸಂಕಷ್ಟಕ್ಕೆ ತಳ್ಳಲು ಮುಂದಾಗಿದೆ ಎಂದು ಆರೋಪಿಸಿದರು. ಸ್ಟ್ರಿಂಗ್ ಆಪರೇಷನ್ ನೆಪದಲ್ಲಿ ವಿರೋಧಿಗಳನ್ನು ಮಟ್ಟಹಾಕುವ ಹುನ್ನಾರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ ಎಂದು ಸಿದ್ದಣಗೌಡ ಕಾಡಮನೋರ ದೂರಿದರು.
ಬೆಳೆಯುತ್ತಿರುವ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಶಾಸಕರ ಹಾಗೂ ಅಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಬೂತಿಹಳ್ಳಿ ನೇತೃತ್ವ ವಹಿಸಿದ್ದರು. ಬಿಜೆಪಿ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಮಹೇಶಗೌಡ, ಯಾದಗಿರಿ ಬಿಜೆಪಿ ಎಸ್‌ಸಿ ಮೋರ್ಚಾದ ಪರಶುರಾಮ ಕುರುಕುಂದಿ, ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಡಾ. ಶಿವರಾಜ ದೇಶಮುಖ, ನಿಕಟಪೂರ್ವ ಬಿಜೆಪಿ ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಹಾಗೂ ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನ. 20ರವರೆಗೆ ಕಾಲುವೆಗೆ ನೀರು:
ಪ್ರತಿಭಟನಾಕಾರರು ಕೃಷ್ಣ ಭಾಗ್ಯ ಜಲನಿಗಮದ ಮುಖ್ಯ ಎಂಜಿನಿಯರ್ ಅಭಿಮನ್ಯು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಎಂಜಿನಿಯರ್ ಅಭಿಮನ್ಯು, ನವೆಂಬರ್ 20ರವರೆಗೆ ಕಾಲುವೆಗೆ ನೀರು ಹರಿಸಲಾಗುತ್ತಿದೆ. ನಂತರ ನೀರು ಹರಿಸುವುದು ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು, ರೈತರ ಬೇಡಿಕೆಗೆ ಸ್ಪಂದಿಸುವಂತೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.






