ಶಹಾಪುರ | ಅಂಬೇಡ್ಕರ್ ಜಯಂತಿ ಅಂಗವಾಗಿ 11 ಜೋಡಿಗಳ ಉಚಿತ ಸಾಮೂಹಿಕ ವಿವಾಹ

ಶಹಾಪುರ : ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದರ ಜೊತೆಗೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವಾಗುತ್ತವೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಹೇಳಿದರು.
ನಗರದ ಸಿಪಿಎಸ್ ಶಾಲಾ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ 11 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ದಾಂಪತ್ಯ ಜೀವನದ ಆರಂಭ ಸರಳತೆ, ಸಹಕಾರ ಹಾಗೂ ಮಾನವೀಯ ಮೌಲ್ಯಗಳಿಂದ ಕೂಡಿರಬೇಕು ಎಂಬ ಸಂದೇಶವನ್ನು ಇಂತಹ ಕಾರ್ಯಕ್ರಮಗಳು ಸಾರುತ್ತವೆ” ಎಂದು ಹೇಳಿದರು.
ವಿವಾಹವಾದ ನವದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಮತ್ತು ಸಹನೆಯೊಂದಿಗೆ ಸುಖಮಯ ಜೀವನ ನಡೆಸಲಿ ಎಂದು ಹಾರೈಸಿದ ಸಚಿವರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಘಟಕರು, ದಾನಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಬಂತೆ ನಾಗರತ್ನ ಜಿ ಅವರು ಬೌದ್ಧ ಧಮ್ಮದ ಪ್ರಕಾರ ಮಂಗಳ್ಯ ಧಾರಣೆ ನೆರವೇರಿಸಿ ಪಂಚಶೀಲ ಹಾಗೂ ತ್ರೀಸರಣ ಪಠಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಏಕತೆ ಮತ್ತು ಸಹಬಾಳ್ವೆಯ ಸಂದೇಶ ಸಾರುತ್ತವೆ. ಯುವ ದಂಪತಿಗಳು ಪರಸ್ಪರ ಗೌರವ, ಜವಾಬ್ದಾರಿ ಹಾಗೂ ಕುಟುಂಬ ಮೌಲ್ಯಗಳನ್ನು ಕಾಪಾಡಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಶರಣು ದೋರನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಿಶ್ವ ನಾಟೇಕಾರ್ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಶ್ರೀಶೈಲ ಹೋಸ್ಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಂತಪ್ಪ ಚಂದಾಪೂರ, ಭೀಮರಾಯ ತಳವಾರ, ಶಿವಕುಮಾರ್ ತಳವಾರ, ಚಿದಾನಂದ ಬಡಿಗೇರ, ರಾಜು ಅಣಿಬಿ, ಮಲ್ಲಣ್ಣ ಉಳ್ಳಂಡಗೇರಿ, ನಾಗಣ್ಣ ಬಡಿಗೇರ, ಬಸವರಾಜ ತಳವಾರ, ಬಾಬುರಾವ್ ಬೂತಾಳಿ, ಡಾ. ರವೀಂದ್ರನಾಥ ಹೋಸ್ಮನಿ, ಸುಭಾಷ ತಳವಾರ, ನಿಂಗಪ್ಪ ನಾಟೇಕಾರ್, ಸುಭಾಷ ನಾಟೇಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವು ಪೋತೆ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಬಡಿಗೇರ ಸ್ವಾಗತಿಸಿದರು. ಸಂತೋಷ ಹೋಸ್ಮನಿ ವಂದಿಸಿದರು.






