ಶಹಾಪುರ | ಬಸವಣ್ಣನ ಮಾರ್ಗದಲ್ಲಿ ನಡೆದರೆ ಬದುಕು ಬಂಗಾರವಾಗುತ್ತದೆ : ವಿಶ್ವಾರಾಧ್ಯ ಸತ್ಯಂಪೇಟೆ

ಶಹಾಪುರ : ಹನ್ನೆರಡನೆಯ ಶತಮಾನದ ಬಸವಣ್ಣನು ಮಾನವಕುಲಕ್ಕೆ ನಿರ್ಭಯವಾಗಿ ನಡೆಯಲು, ನುಡಿಯಲು ಹಾಗೂ ಬದುಕಲು ಕಲಿಸಿದ ಮಹಾನ್ ಚಿಂತಕ. ಅವರ ಮಾರ್ಗದರ್ಶನದಲ್ಲಿ ನಾವು ನಡೆದುಕೊಂಡರೆ ಜೀವನ ಬಂಗಾರವಾಗುತ್ತದೆ ಎಂದು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ತಾಲೂಕಿನ ಸಗರ ಗ್ರಾಮದ ಸುಬೇದಾರ ವಿದ್ಯಾಲಯದಲ್ಲಿ ‘ಶಾಲೆಯಿಂದ ಶಾಲೆಗೆ ಸಾಂಸ್ಕೃತಿಕ ನಾಯಕ’ ವಿಷಯದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಮನುಷ್ಯರೂ ಹುಟ್ಟುವುದರಲ್ಲಿ ಒಂದೇ. ಹುಟ್ಟುವ ಮೊದಲು ಮಾನವನು ವಿಶ್ವಮಾನವ, ಆದರೆ ನಂತರ ಜಾತಿ–ಧರ್ಮಗಳ ಸಂಕೋಲೆಗೆ ಸಿಲುಕಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರು ಬಾಲ್ಯದಲ್ಲೇ ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಿದ್ದರು. ಅವರ ಪ್ರಶ್ನೆಗಳನ್ನು ಸಹಿಸದ ಪಟ್ಟಭದ್ರರು ಅವರನ್ನು ಊರು ಮತ್ತು ಮನೆಯಿಂದಲೇ ಬಹಿಷ್ಕರಿಸಿದ್ದರು. ತನ್ನ ಅಕ್ಕ ಅಕ್ಕನಾಗಮ್ಮಳಿಗೆ ಇಲ್ಲದ ಧಾರ್ಮಿಕ ಸ್ವಾತಂತ್ರ್ಯ ನನಗೂ ಬೇಡ ಎಂದು ಹೇಳುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದರು ಎಂದು ತಿಳಿಸಿದರು.
ಹೆಣ್ಣು ಕನಿಷ್ಠವೂ ಅಲ್ಲ, ಗಂಡು ಶ್ರೇಷ್ಠವೂ ಅಲ್ಲ ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಬಸವಣ್ಣನು, ವಿದ್ಯೆಯಿಂದ ಅಕ್ಷರವಂತನಾಗಬಹುದು ಮತ್ತು ದುಡಿಯುವ ಮೂಲಕ ಶ್ರೀಮಂತನಾಗಬಹುದು ಎಂಬ ಸಂದೇಶ ನೀಡಿದ ಮಹಾನ್ ಸಮಾಜ ಸುಧಾರಕ ಎಂದು ಸತ್ಯಂಪೇಟೆ ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ದತ್ತಾತ್ರೇಯ ಕುಲ್ಕರ್ಣಿ, ಪ್ರಶ್ನೆಗಳು ವ್ಯಕ್ತಿಯನ್ನೂ ನಾಗರಿಕ ಸಮಾಜವನ್ನೂ ಬೆಳೆಸುತ್ತವೆ. ವಿದ್ಯಾರ್ಥಿಗಳು ಗುರುಗಳಲ್ಲಿ ವಿಶ್ವಾಸವಿಟ್ಟು ವಿದ್ಯೆ ಕಲಿಯಬೇಕು. ಶಿಕ್ಷಕರು ಮಕ್ಕಳನ್ನು ತಿದ್ದಿ-ತೀಡಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವ ಶಕ್ತಿ ಹೊಂದಿದ್ದಾರೆ. ಬಸವಾದಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಆರಂಭದಲ್ಲಿ ಶಿಕ್ಷಕ ಸುದೀರ ಆಸ್ಪಳ್ಳಿ ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕರಣ ಸುಬೇದಾರ ವಹಿಸಿದ್ದರು. ಕೊನೆಯಲ್ಲಿ ವಂದನಾರ್ಪಣೆ ನಡೆಯಿತು. ಶಿವಕುಮಾರ ಅಕ್ಕಿ, ಪ್ರಿಯಾಂಕ ಚವ್ಹಾಣ್, ವೇದಾ ನಾಯಕ, ಸುನೀಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







