ಶಹಾಪುರ | ಕವಿಗೋಷ್ಠಿಗಳು ಕನ್ನಡ ಭಾಷೆಯ ಅಸ್ಮಿತೆ ಉಳಿಸುವ ಪ್ರಮುಖ ವೇದಿಕೆ: ಸಿದ್ದಪ್ಪ ಹೊಟ್ಟಿ

ಶಹಾಪುರ: ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಅಧ್ಯಯನ ಮಾಡುವ ಮೂಲಕ ಭಾಷೆಯ ಅಸ್ಮಿತೆ, ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಭಿಪ್ರಾಯಪಟ್ಟರು.
ನಗರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ವತಿಯಿಂದ ದಿವಂಗತ ಶ್ರವಣ ಬಸವರಾಜ್ ಆನೆಗುಂದಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಶರಣ ಪರಂಪರೆ ಕವಿಗೋಷ್ಠಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದರಾಮ ಹೊನ್ಕಲ್, ಸಾಹಿತ್ಯ ಸೇವೆಗೆ ದೊರೆತ ಈ ಗೌರವ ಕನ್ನಡ ಭಾಷೆಯ ಸೇವೆಗೆ ಮತ್ತಷ್ಟು ಪ್ರೇರಣೆ ನೀಡಿದೆ. ಕನ್ನಡ ಭಾಷೆಯ ಉಳಿವಿಗಾಗಿ ಕಾವ್ಯ ರಚನೆ ಹಾಗೂ ಯುವ ಕವಿಗಳಿಗೆ ಮಾರ್ಗದರ್ಶನ ನೀಡಲು ಸದಾ ಸಿದ್ಧನಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜನಪದ ಅಕಾಡೆಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ಮಡ್ನಾಳ, ಸ್ಪಾರ್ಕ್ ಅಕಾಡೆಮಿ ಬೆಂಗಳೂರು ವತಿಯಿಂದ ರಾಜ್ಯ ವಿದ್ಯಾಭೂಷಣ ಪ್ರಶಸ್ತಿ ಪಡೆದ ಸುರೇಶ್ ಬಾಬು ಅರುಣಿ, ಚಂದ್ರಕಲಾ ಗೂಗಲ್, ಕಲಾನಿಕೇತನ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜಬೇದಾ ಬೇಗಂ ಹಾಗೂ ನೂತನ ಯಾದಗಿರಿ ಜಿಲ್ಲಾ ಬೌದ್ಧ ಮಹಾಸಭೆಯ ಅಧ್ಯಕ್ಷ ಬಾಬುರಾವ್ ಬುತಾಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ರವೀಂದ್ರನಾಥ ಎಸ್. ಹೊಸಮನಿ ಮಾತನಾಡಿ, ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಯುವ ಕವಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಇಂತಹ ಕವಿಗೋಷ್ಠಿಗಳು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಸಾಹಿತ್ಯಾಸಕ್ತರಲ್ಲಿ ಕನ್ನಡಾಭಿಮಾನ ಬೆಳೆಸುತ್ತವೆ ಎಂದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಡಾ.ಸುಭಾಷಚಂದ್ರ ಕೌಲಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಸಾಹಿತ್ಯಾಸಕ್ತರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷರು ಹಾಗೂ ದತ್ತಿದಾನಿಗಳಾದ ಸಿದ್ದಲಿಂಗಣ್ಣ ಆನೆಗುಂದಿ, ಹುಸೇನಪ್ಪ ಕಟ್ಟಿಮನಿ, ಮಲ್ಲಣ್ಣ ಹೊಸಮನಿ, ಡಾ.ದೇವೇಂದ್ರಪ್ಪ ಹಡಪದ, ಸೈಯದ್ ಚಾಂದ್ ಪಾಷಾ, ಲಿಂಗಣ್ಣ ಪಡಶೆಟ್ಟಿ, ದೇವಿಂದ್ರಪ್ಪ ಮಡಿವಾಳ್ಕರ್, ಮೋಹನ್ ಕುಮಾರ್ ಹೊಸಮನಿ, ಬಸವರಾಜ್ ಹಿರೇಮಠ, ಮೀನಾಕ್ಷಿ ಆರ್.ಹೊಸಮನಿ, ಭೀಮರಾಯ ನಾಗನಟಗಿ, ಹನುಮಂತ ಹಳ್ಳದಮನಿ, ಬಿ.ಎಂ.ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವೇಂದ್ರಪ್ಪ ವಿಶ್ವಕರ್ಮ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಾಬು ಅರುಣಿ ನಿರೂಪಿಸಿದರು. ನಿಂಗಣ್ಣ ತಿಪ್ಪನಹಳ್ಳಿ ವಂದಿಸಿದರು.






