ಶಹಾಪುರ | ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಿಪಂ ಕಚೇರಿ ಎದುರು ಪ್ರತಿಭಟನೆ

ಶಹಾಪುರ: ತಾಲೂಕಿನ ಬೇವಿನಹಳ್ಳಿ ಜೆ. ಗ್ರಾಮದಲ್ಲಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘಟನೆ ಹಾಗೂ ಗ್ರಾಮದ ಸಮಸ್ತ ಗ್ರಾಮಸ್ಥರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬೇವಿನಹಳ್ಳಿ ಜೆ. ಗ್ರಾಮವು ಈ ಹಿಂದೆ ದೊರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಕಳೆದ ಆರೇಳು ತಿಂಗಳ ಹಿಂದೆ ಕನ್ಯಾಕೊಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಪಂಚಾಯಿತಿ ವ್ಯಾಪ್ತಿ ಬದಲಾವಣೆಯಾದ ಬಳಿಕ ಗ್ರಾಮದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮದ ಸಮಸ್ಯೆಗಳನ್ನು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಪ್ರತಿಯೊಂದು ವಾರ್ಡ್ ಹಾಗೂ ಜನವಸತಿ ಪ್ರದೇಶಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಬೇಕು. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ಶೀಘ್ರ ಕಾಮಗಾರಿ ಆರಂಭಿಸಬೇಕು. ಕೇವಲ ಭರವಸೆ ನೀಡದೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಪ್ರದೀಪ್ ಅಣಿಬಿ, ಬಸವರಾಜ ಬೇವಿನಹಳ್ಳಿ, ಮಲ್ಲೇಶ್ ಕಟ್ಟಿಮನಿ, ಸಂಗೂ ಬೇವಿನಹಳ್ಳಿ, ದೇವರಾಜ ರಸ್ತಾಪುರ, ಸಿದ್ದು ಹೊಸಮನಿ, ಭೋಜಪ್ಪ ದಿಗ್ಗಿ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.






