ಶಹಾಪುರ | ವಿಭೂತಿಹಳ್ಳಿ ರಸ್ತೆ ವಿವಾದ : ದಲಿತ ಮುಖಂಡರ ಪ್ರತಿಭಟನೆ

ಶಹಾಪುರ : ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ದಲಿತರ ಕೇರಿಗೆ ಸಂಪರ್ಕಿಸುವ ರಸ್ತೆ ನಿರ್ಮಾಣ ವಿಚಾರವಾಗಿ ತಕರಾರು ಉಂಟಾದ ಹಿನ್ನೆಲೆಯಲ್ಲಿ ದಲಿತ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೆಕೆಆರ್‌ಡಿಬಿ ಅನುದಾನದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಆದರೆ ರಸ್ತೆ ಕಾಮಗಾರಿಗೆ ಕೆಲ ಮೇಲ್ಜಾತಿಯ ಸಮುದಾಯದವರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಬಳಿಕ ತಡೆಯಾಜ್ಞೆ ತೆರವಾದನಂತರ ಪುನಃ ರಸ್ತೆ ಕಾಮಗಾರಿ ಆರಂಭಿಸಲು ಮುಂದಾದಾಗ ಮತ್ತೆ ತಕರಾರು ಉಂಟಾದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಕಾಂಕ್ರೀಟ್ ರಸ್ತೆಯಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಭೇಟಿ ನೀಡಿ, ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಿ ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾಳೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು.
-ವಿಶ್ವ ನಾಟೇಕಾರ್, ಕದಸಂಸ ‘ಅಂಬೇಡ್ಕರ್ ಮಾರ್ಗ’ದ ಜಿಲ್ಲಾ ಸಂಚಾಲಕ






