ಶಹಾಪುರ | ಕೊಳ್ಳೂರು ಸೇತುವೆ ಮುಳುಗಡೆ : ಸಂಚಾರ ಸಂಪೂರ್ಣ ಬಂದ್

ಶಹಾಪುರ : ಕೃಷ್ಣಾ ನದಿಯಿಂದ ಹೆಚ್ಚುವರಿಯಾಗಿ ಬಿಡಲಾದ 2.60 ಕ್ಯುಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ತಾಲೂಕಿನ ಹತ್ತಿಗೂಡುರು ಸಮೀಪದ ಕೊಳ್ಳೂರು ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸಂಚಾರ ಬಂದ್ ಮಾಡಲಾಗಿದೆ.
ಬುಧವಾರ ರಾತ್ರಿಯೇ ಮುಂಜಾಗ್ರತ ಕ್ರಮವಾಗಿ ಸಂಚಾರ ಬಂದ್ ಮಾಡಲಾಗಿದ್ದು, ಗುರುವಾರ ಬೆಳಗಾಗುವುದರೊಳಗಾಗಿ ಈ ಸೇತುವೆ ಮುಳುಗಡೆಯಾಗಿದ್ದರಿಂದ ಅಕ್ಕ, ಪಕ್ಕ ಅನೇಕ ರೈತರ ಹೊಲಗಳಿಗೆ ನೀರು ನುಗ್ಗಿದ್ದು, ಸುಮಾರು ಎರಡು ಕಿಮೀ ಉದ್ದನೆಯ ಈ ಸೇತುವೆ ಕಾಣದಷ್ಟು ನೀರಿನಿಂದ ಜಲಾವೃತಗೊಂಡಿದೆ.
ಸ್ಥಳಕ್ಕೆ ಜನ ಹೋಗಬಾರದು ಮತ್ತು ಜಾನುವಾರುಗಳನ್ನು ಬೀಡಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಹೀಗಾಗಿ ಇಲ್ಲಿಂದ ದೇವದುರ್ಗ ಮತ್ತೀತ್ತರ ಊರುಗಳಿಗೆ ಹೋಗುವ ಪ್ರಯಾಣಿಕರು ಈಗ ಸುರಪುರ ಮಾರ್ಗದಿಂದ ತಿಂಥಣಿ ಬ್ರೀಜ್ ತಲುಪಿಸಿ ಅಲ್ಲಿಂದ ದೇವದುರ್ಗಕ್ಕೆ ಸುಮಾರು 50 ಕಿಮೀ ಸುತ್ತುವರೆದು ತೆರಳುವ ಪ್ರಸಂಗ ಎದುರಾಗಿದೆ. ನೀರಿನ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಮಹಾರಾಷ್ಟ್ರದ ಉಜನಿ ಡ್ಯಾಮ್ ಯಿಂದ ಬಿಡಲಾಗುತ್ತಿರುವ ಹೆಚ್ಚುವರಿ ನೀರಿನಿಂದಾಗಿ ಇಲ್ಲಿನ ಸನ್ನತಿ ಬ್ಯಾರೆಜ್‌ನಿಂದ ಗುರುವಾರ ಸಂಜೆ ಸುಮಾರು 90ರಿಂದ 1 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಹತ್ತಿಕುಣಿ, ಸೌದಾಗರ ಜಲಾಶಯಗಳಿಂದಲ್ಲೂ ಹೆಚ್ಚುವರಿ ನೀರು ಹಳ್ಳದ ಮೂಲಕ ಹರಿದು ಬಿಡುತ್ತಿರುವುದರಿಂದ ವಡಗೇರಾ ತಾಲೂಕಿನ ಗುರುಸುಣಗಿ ಬ್ರೀಜ್ ತುಂಬಿ ಹರಿಯುವ ಸಾಧ್ಯತೆಗಳಿವೆ ಎಂದು ಮಾಹಿತಿ ಇದ್ದು, ಈ ಎಲ್ಲ ಅಪಾಯದ ಸ್ಥಳಗಳಿಗೆ ಜನ, ಜಾನವಾರುಗಳು ಹೋಗಬಾರದೆಂದು ಜಿಲ್ಲಾಡಳಿತ ತಿಳಿಸಿದೆ. ಪರಸ್ಥಿತಿ ನಿಭಾಯಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.







