ವಿಧಾನಸಭೆಯ ವಿಶೇಷ ಅಧಿವೇಶನ | ಯಾದಗಿರಿಯ ಸಮಸ್ಯೆಗಳನ್ನು ಬಿಚ್ಚಿಟ್ಟ ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಗುರುವಾರ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಗಿರಿಜಿಲ್ಲೆಯ ಬರ ಪರಿಸ್ಥಿತಿ, ರೈತರ ಬೆಳೆ ನಷ್ಟ, ಉದ್ಯೋಗಕ್ಕಾಗಿ ವಲಸೆ, ಕುಡಿಯುವ ನೀರಿನ ಸಮಸ್ಯೆ, ಭೀಮಾ ನದಿ ನೀರಿನ ಹಂಚಿಕೆ, ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ಥಿತಿ, ಆರ್ ಓ ಘಟಕಗಳ ದುಸ್ಥಿತಿ, ಕಡೇಚೂರು ಕೈಗಾರಿಕಾ ಪ್ರದೇಶದ ಮಾಲಿನ್ಯ ಹಾಗೂ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ರೈತರು ಮತ್ತು ಬಡವರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು. ವಿಶೇಷವಾಗಿ ಯಾದಗಿರಿ ಜಿಲ್ಲೆ ಮತ್ತು ಗುರುಮಿಟ್ಕಲ್ ಮತಕ್ಷೇತ್ರದ ಪರಿಸ್ಥಿತಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಗುರುಮಿಟ್ಕಲ್ ಕ್ಷೇತ್ರದಲ್ಲಿ ಒಂದು, ಎರಡು ಮತ್ತು ಮೂರು ಎಕರೆ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಐದು ಅಥವಾ ಹತ್ತು ಎಕರೆ ಜಮೀನು ಹೊಂದಿರುವ ರೈತರು ಗ್ರಾಮಗಳಲ್ಲಿ ವಿರಳವಾಗಿದ್ದಾರೆ ಎಂದು ಕಂದಕೂರ ಹೇಳಿದರು.
ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಣ್ಣ ರೈತರಿಗೆ ಬರ ಮತ್ತಷ್ಟು ಹೊಡೆತ ನೀಡಿದೆ. ಮಳೆ ಕೈಕೊಟ್ಟರೆ ಕೃಷಿಯಿಂದ ಆದಾಯವಿಲ್ಲ, ಸ್ಥಳೀಯವಾಗಿ ಕೆಲಸವೂ ಸಿಗದಿದ್ದರೆ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ದೂರದ ನಗರಗಳಿಗೆ ದುಡಿಯಲು ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಹೇಳಿದರು.
ಮಳೆ ಕೊರತೆಯ ಸಾಧ್ಯತೆ ಇರುವುದರಿಂದ ರೈತರು ಬಿತ್ತನೆಗೆ ಆತುರಪಡಬಾರದು ಎಂದು ಕೃಷಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೂ ಬಡತನ ಮತ್ತು ಕೃಷಿಯ ಮೇಲಿನ ನಂಬಿಕೆಯಿಂದ ರೈತರು ಸಾಲ ಮಾಡಿ ಬೀಜ ಹಾಗೂ ಕೃಷಿ ಪರಿಕರಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ ಎಂದು ಕಂದಕೂರ ವಿವರಿಸಿದರು.
ಶೇ.93ರಿಂದ 95 ಬಿತ್ತನೆ ನಡೆದಿದೆ ಎಂದು ಉಲ್ಲೇಖಿಸಿದ ಅವರು, ನಂತರ ಮಳೆ ಕೈಕೊಟ್ಟ ಪರಿಣಾಮ ರೈತರ ಹೂಡಿಕೆ ನೀರಿನಲ್ಲಿ ಹೋಮವಾದಂತಾಗಿದೆ ಎಂದರು. ಮಳೆ ಕೊರತೆಯಿಂದ ಹೆಸರು ಮತ್ತು ಉದ್ದು ಬೆಳೆಗಳು ಹಾನಿಗೊಳಗಾಗಿದ್ದು, ತೊಗರಿ ಹಾಗೂ ಹತ್ತಿಗೂ ತೀವ್ರ ಪರಿಣಾಮವಾಗಿದೆ. ಭತ್ತದ ಬೆಳೆ ಕೂಡ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ಒಂದು ಎಕರೆ, ಎರಡು ಎಕರೆ ಜಮೀನನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಬೆಳೆ ನಷ್ಟವಾದರೆ ಪರ್ಯಾಯ ಆದಾಯದ ಮೂಲವೇ ಇಲ್ಲದಂತಾಗುತ್ತದೆ. ಹೀಗಾಗಿ ಬರವನ್ನು ಕೇವಲ ಮಳೆ ಕೊರತೆಯ ದೃಷ್ಟಿಯಿಂದ ನೋಡದೆ, ಗ್ರಾಮೀಣ ಕುಟುಂಬಗಳ ಬದುಕಿನ ಸಮಸ್ಯೆಯಾಗಿ ಸರಕಾರ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.
ಬರದ ಪರಿಣಾಮ ಗುರುಮಿಟ್ಕಲ್ ಸೇರಿದಂತೆ ಯಾದಗಿರಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಬೋರ್‌ವೆಲ್‌ಗಳು ಬತ್ತುತ್ತಿವೆ ಎಂದು ಕಂದಕೂರ ಹೇಳಿದರು. ಕುಡಿಯುವ ನೀರು ಪೂರೈಸುವುದೇ ಸ್ಥಳೀಯ ಆಡಳಿತಕ್ಕೆ ಸವಾಲಾಗಿದೆ. ಈಗಾಗಲೇ ಕೊರೆಯಲಾದ ಬೋರ್‌ವೆಲ್‌ಗಳ ವೆಚ್ಚ ಪಾವತಿಸುವುದಕ್ಕೂ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ನೀಡಲಾಗಿರುವ 1 ಕೋಟಿ ರೂ.ಅನುದಾನ ಜಿಲ್ಲೆಯ ಅಗತ್ಯಗಳಿಗೆ ಸಾಕಾಗುವುದಿಲ್ಲ ಎಂದು ಕಂದಕೂರ ಹೇಳಿದರು.
ಬರದ ತೀವ್ರತೆ ಹೆಚ್ಚಿರುವುದರಿಂದ ಹೊಸ ಬೋರ್‌ವೆಲ್, ಹಳೆಯ ಬೋರ್‌ವೆಲ್ ದುರಸ್ತಿ, ಪೈಪ್‌ಲೈನ್, ಕುಡಿಯುವ ನೀರಿನ ಸಾಗಣೆ ಸೇರಿದಂತೆ ಹಲವು ಕೆಲಸಗಳಿಗೆ ಹೆಚ್ಚುವರಿ ಹಣ ಬೇಕಾಗಿದೆ. ಆದ್ದರಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.






